ADVERTISEMENT

ಸಂಕ್ಷಿಪ್ತ ಸುದ್ದಿ ವಿದೇಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಕೊಲೆ: ಭಾರತೀಯ ವ್ಯಕ್ತಿ ತಪ್ಪಿತಸ್ಥ
ವಾಷಿಂಗ್ಟನ್ (ಐಎಎನ್‌ಎಸ್):
ದ್ವೇಷದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ಸಿಖ್ ಗುರುದ್ವಾರದ ಬಳಿ 2008ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಇಲ್ಲಿನ ನ್ಯಾಯಮಂಡಳಿ ತೀರ್ಪು ನೀಡಿದೆ.

ಗುರುಪ್ರೀತ್ ಸಿಂಗ್ ಘೋಷಾಲ್ (20) ಕೊಲೆ ಪ್ರಕರಣದ ತಪ್ಪಿತಸ್ಥ. ಇಲ್ಲಿನ ಸಾಕ್ರಾಮೆಂಟೊದ ಬ್ರಾದ್‌ಷಾ ಗುರುದ್ವಾರದ ಬಳಿ 2008 ಆಗಸ್ಟ್ 31ರಂದು ನಡೆದಿದ್ದ ಸಿಖ್ ಕ್ರೀಡಾ ಹಬ್ಬದ ವೇಳೆ, ಭಾರತೀಯ ಮೂಲದ ಪರಮ್‌ಜಿತ್ ಪಮ್ಮ ಸಿಂಗ್ ಎಂಬುವವರನ್ನು ಘೋಷಾಲ್ ಮತ್ತು ಆತನ ಸ್ನೇಹಿತ ಸೇರಿ ಕೊಲೆ ಮಾಡಿದ್ದರು.

ಪಾಕ್: ನಟಿ ಮೇಲೆ ಆಸಿಡ್ ದಾಳಿ
ಪೆಶಾವರ (ಪಿಟಿಐ):
ಚಲನಚಿತ್ರ ನಟಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆಸಿಡ್ ಎರಚಿರುವ ಘಟನೆ ಪಾಕಿಸ್ತಾನದ ಖೈಬರ್ ಫಖ್ತುಂಕ್ವಾದಲ್ಲಿ ಶನಿವಾರ ನಡೆದಿದೆ.

ಬುಶ್ರಾ (18) ದಾಳಿಗೊಳಗಾದ ನಟಿ. ಘಟನೆಯಲ್ಲಿ ನಟಿಯ ಮುಖ ಮತ್ತು ಭುಜದ ಶೇ 33ರಷ್ಟು ಭಾಗ ಸುಟ್ಟು ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಟಿ ಮಲಗಿದ್ದ  ಕೋಣೆಗೆ ಗೋಡೆ ಹತ್ತಿ ಪ್ರವೇಶಿಸಿರುವ ವ್ಯಕ್ತಿ, ಆಸಿಡ್ ಎರಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಚಿತ್ರ ನಿರ್ಮಾಪಕನೊಬ್ಬನ ವಿರುದ್ಧ ನಟಿ ಕುಟುಂಬದವರು ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆತ್ಮಹತ್ಯಾ ಕಾರ್ ಬಾಂಬ್ ದಾಳಿ: 9 ಸಾವು
ಸಮರ‌್ರಾ, ಇರಾಕ್ (ಎಎಫ್‌ಪಿ):
ರಾಜಧಾನಿ ಬಾಗ್ದಾದ್‌ನ ಉತ್ತರ ಭಾಗದಲ್ಲಿ ಶನಿವಾರ ನಡೆದ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಪೊಲೀಸ್ ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಸ್ವಾಥೆ ಪ್ರಾಂತ್ಯದಲ್ಲಿ ಒಂದು ತಿಂಗಳಿಂದ ನಡೆಯುತ್ತಿರುವ ಅಲ್ಪಸಂಖ್ಯಾತ ಸುನ್ನಿ ಪಂಥದವರ ಪ್ರತಿಭಟನೆ ವೇಳೆಯೇ ಈ ದಾಳಿ ನಡೆದಿದ್ದು, ಅಲ್ಲಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT