ADVERTISEMENT

ಸಜೀವಗೊಂಡ ದೈತ್ಯ ವೈರಸ್: ಅಪಾಯಗಳ ಸರಣಿಗೆ ಮುನ್ನುಡಿ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 13:17 IST
Last Updated 4 ಮಾರ್ಚ್ 2014, 13:17 IST

ಲಂಡನ್ (ಪಿಟಿಐ): ಸೈಬೀರಿಯಾದ ಹಿಮಾಚ್ಛಾದಿತ ಶೀತ ಕೆಳಭೂಸ್ತರದಲ್ಲಿ ಸುಪ್ತಾವಸ್ಥೆಯಲ್ಲಿದ್ದ ಕನಿಷ್ಠ 30,000 ವರ್ಷಗಳಷ್ಟು ಹಿಂದಿನ ದೈತ್ಯ ವೈರಸ್ ಒಂದು ಫ್ರೆಂಚ್ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಪುನಃಶ್ಚೇತನ ನೀಡಿದ ಬಳಿಕ ಜೀವ ತಳೆದಿದೆ.

ಹಿಮಗಡ್ಡೆಯಡಿಯಲ್ಲಿ 30 ಮೀಟರ್ ಆಳದಲ್ಲಿ ಹೂತುಹೋಗಿದ್ದ ಈ ವೈರಸ್ ಮಾನವರಿಗಾಗಲೀ ಪ್ರಾಣಿಗಳಿಗಾಗಲೀ ಅಪಾಯಕಾರಿಯಲ್ಲ. ಆದರೆ ಇಷ್ಟೊಂದು ದೀರ್ಘ ಕಾಲದ ಬಳಿಕ ವೈರಸ್ಸಿನ ಈ ಪುನಶ್ಚೇತನ ಸಾಧ್ಯವಾದ ಹಿನ್ನೆಲೆಯಲ್ಲಿ ಇತರ ವೈರಸ್ ಗಳೂ ಇದೇ ರೀತಿ ಜೀವ ತಳೆಯಬಹುದಾದ ಸಾಧ್ಯತೆಗಳು ಅನಾವರಣಗೊಂಡಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

'ಇಷ್ಟೊಂದು ದೀರ್ಘ ಕಾಲದ ಬಳಿಕವೂ ವೈರಸ್ ಸಾಂಕ್ರಾಮಿಕ ಸಾಮರ್ಥ್ಯ ಹೊಂದಿರುವುದನ್ನು ಇದೇ ಮೊದಲ ಬಾರಿಗೆ ನಾವು ಕಂಡಿದ್ದೇವೆ' ಎಂದು ಫ್ರಾನ್ಸಿನ ಏಕ್ಸ್ -ಮಾರ್ಸಿಲೆ ವಿಶ್ವ ವಿದ್ಯಾಲಯದ ವೈಜ್ಞಾನಿಕ ಸಂಶೋಧನೆಯ ರಾಷ್ಟ್ರೀಯ ಕೇಂದ್ರದ (ಸಿ ಎನ್ ಆರ್ ಎಸ್) ಪ್ರೊಫೆಸರ್ ಜೀನ್ - ಮೈಕೆಲ್ ಕ್ಲಾವೆರಿ ಹೇಳಿದ್ದಾರೆ.

'ಪಿಥೋವೈರಸ್ ಸೈಬೆರಿಕಮ್ ಹೆಸರಿನ ಈ ಸೂಕ್ಷ್ಮಾಣು 10 ವರ್ಷಗಳ ಹಿಂದೆ ಪತ್ತೆಯಾದ ದೈತ್ಯ ವೈರಸ್ ವರ್ಗಕ್ಕೆ ಸೇರಿದೆ.

'ಸೂಕ್ಷ್ಮ ದರ್ಶಕದ ಮೂಲಕ ನೋಡಬಹುದಾದ ಈ ವೈರಸ್ ಗಳು 1.5 ಮೈಕ್ರೋ ಮೀಟರ್ ನಷ್ಟು ಉದ್ದವಾಗಿದ್ದು, ಈ ವರೆಗೆ ಪತ್ತೆಯಾದ ದೈತ್ಯ ವೈರಸ್ ಗಳಲ್ಲೇ ದೊಡ್ಡ ಗಾತ್ರದ್ದು' ಎಂದು 'ಬಿಬಿಸಿ ನ್ಯೂಸ್' ವರದಿ ಮಾಡಿದೆ.

ವಿಜ್ಞಾನಿಗಳಿಂದ ಪುನಃಶ್ಚೇತನ ಪಡೆದ ವೈರಸ್ ಏಕಕೋಶದ ಅಮೀಬಾಗಳ ಮೇಲೆ ದಾಳಿ ನಡೆಸುವುದನ್ನು ಪರೀಕ್ಷೆಗಳು ದೃಢ ಪಡಿಸಿವೆ. ಆದರೆ ಅದು ಮಾನವರು ಮತ್ತು ಪ್ರಾಣಿಗಳತ್ತ ಸೋಂಕಲಿಲ್ಲ ಎಂದು ವರದಿ ಹೇಳಿದೆ.

ಇದಕ್ಕಿಂತಲೂ ಅಪಾಯಕಾರಿಯಾದ ದೈತ್ಯ ರೋಗಾಣುಗಳು ಸೈಬೀರಿಯಾ ಹಿಮಾಚ್ಛಾದಿತ ಶೀತ ಕೆಳಭೂಸ್ತರದಲ್ಲಿ ಹೂತಿರುವ ಸಾಧ್ಯತೆಗಳು ಇವೆ ಎಂದು ಸಂಶೋಧಕರು ಇದೀಗ ಶಂಕಿಸಿದ್ದಾರೆ.

1970ರಿಂದೀಚೆಗೆ ಸೈಬೀರಿಯಾ ಶೀತ ಕೆಳಭೂಸ್ತರದ ದಪ್ಪ ಕಡಿಮೆಯಾಗುತ್ತಿದ್ದು, ಹವಾಮಾನ ಬದಲಾವಣೆಯ ಪರಿಣಾಮವಾಗಿ ಅದು ಇನ್ನಷ್ಟು ಕರಗಬಹುದು ಎಂದು ಸಂಶೋದಕರು ಹೇಳಿದ್ದಾರೆ.

ಸೈಬೀರಿಯಾ ಶೀತಕೆಳಭೂಸ್ತರ ಕರಗಿದಷ್ಟೂ ಹೊಸ ವೈರಾಣು ಬೆದರಿಕೆಯ ಸಾಧ್ಯತೆಗಳು ಹೆಚ್ಚಬಹುದು 30 ವರ್ಷಗಳ ಹಿಂದೆ ಸಂಪೂರ್ಣ ನಿರ್ಮೂಲನಗೊಳಿಸಲಾಗಿದೆ ಎಂದು ಘೋಷಿಸಲಾಗಿದ್ದ 'ಸಿಡುಬಿನಂತಹ' ಕಾಯಿಲೆಗಳ ವೈರಾಣುಗಳು ಹೊಸ ಅಪಾಯಗಳನ್ನು ತಂದೊಡ್ಡ ಬಹುದು ಎಂದೂ ಸಂಶೋಧಕರು ಹೇಳಿದ್ದಾರೆ.

ಅಮೀಬಾ ಮೇಲೆ ದಾಳಿ ನಡೆಸಬಲ್ಲ ವೈರಸ್ ಪುನಃಶ್ಚೇತನಗೊಂಡ ರೀತಿಯಲ್ಲಿಯೇ ಈ ವೈರಸ್ ಗಳು ಪುನಃಶ್ಚೇತನ ಪಡೆಯಬಹುದು ಎಂಬುದು ನಿಜವಾದಲ್ಲಿ, ಹುಟ್ಟಡಗಿಸಲಾಗಿದೆ ಎಂದು ಘೋಷಿತವಾದ ಸಿಡುಬು ವೈರಾಣು ನಿರ್ಮೂಲನ ಗೊಂಡದ್ದು ನಮ್ಮ ಭೂಮಿಯ ಮೇಲ್ಮೈಯಿಂದ ಮಾತ್ರ ಎಂಬುದು ಸ್ಪಷ್ಟವಾಗಲಿದೆ ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.