ADVERTISEMENT

ಸಯೀದ್ ಬೆಂಬಲಿಗ ಯುವಕನಿಗೆ ಅಮೆರಿಕದಲ್ಲಿ 12 ವರ್ಷ ಸಜೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 9:30 IST
Last Updated 14 ಏಪ್ರಿಲ್ 2012, 9:30 IST

ವಾಷಿಂಗ್ಟನ್ (ಪಿಟಿಐ):  ಭಯೋತ್ಪಾದಕ ಗುಂಪಿನ ಪರವಾಗಿ ವಿಡಿಯೋ ಪ್ರಚಾರ ಮಾಡಿ ಅದರ ನೇಮಕಾತಿ ಹಾಗೂ ನಿಧಿ ಸಂಗ್ರಹದಲ್ಲಿ ನೆರವಾಗುವ ಮೂಲಕ ಲಷ್ಕರ್ -ಎ- ತೊಯ್ಬಾ ಸಂಘಟನೆಯನ್ನು ಬೆಂಬಲಿಸಿದ್ದಕ್ಕಾಗಿ ಅಮೆರಿಕದ ನ್ಯಾಯಾಲಯವೊಂದು  24ರ ಹರೆಯದ ಪಾಕಿಸ್ತಾನಿ ಪ್ರಜೆಗೆ 12 ವರ್ಷಗಳ ಸೆರೆವಾಸವನ್ನು ವಿಧಿಸಿದೆ.

ಜುಬೈರ್ ಅಹ್ಮದ್ ಎಂಬ ತರುಣನನ್ನು ವರ್ಜೀನಿಯಾದಲ್ಲಿನ ಅಮೆರಿಕದ ಜಿಲ್ಲಾ ನ್ಯಾಯಾಲಯ ಡಿಸೆಂಬರ್ ತಿಂಗಳಲ್ಲಿ ತಪ್ಪಿತಸ್ತ ಎಂಬುದಾಗಿ ಘೋಷಣೆ ಮಾಡಿತ್ತು. ಶುಕ್ರವಾರ ಆತನಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ 12 ವರ್ಷದ ಸೆರೆವಾಸವನ್ನು ವಿಧಿಸಿತು.

~ಜುಬೈರ್ ಅಹ್ಮದ್ ಲಷ್ಕರ್-ಎ-ತೊಯ್ಬಾದ ಹಿಂಸಾತ್ಮಕ ಗುರಿಗಳತ್ತ ಬದ್ಧನಾಗಿದ್ದ. ಇದೇ ಆತನನ್ನು ಅದರ ಪರವಾಗಿ ಆನ್ ಲೈನ್ ಪ್ರಚಾರ ಮಾಡುವಂತೆ ಹಾಗೂ ಇತರರನ್ನು ಸದಸ್ಯರನ್ನಾಗಿಸುವಂತೆ ಮತ್ತು 2008ರಲ್ಲಿ ಭಾರತದ ಮುಂಬೈಯಲ್ಲಿ 160 ಜನರ ಸಾವಿಗೆ ಕಾರಣವಾದ ಭೀಕರ ದಾಳಿ ನಡೆಸಲು ಕಾರಣವಾದ ಭಯೋತ್ಪಾದಕ ಸಂಘಟನೆಗಾಗಿ ನಿಧಿ ಸಂಗ್ರಹ ಮಾಡುವಂತೆ ಮಾಡಿತ್ತು. ಮುಂಬೈ ದಾಳಿಯಲ್ಲಿ ಮೃತರಾದವರಲ್ಲಿ ಇಬ್ಬರು ವರ್ಜೀನಿಯನ್ನರಾಗಿದ್ದರು~ ಎಂದು ಅಮೆರಿಕದ ಅಟಾರ್ನಿ ನೀಲ್ ಎಚ್ ಮ್ಯಾಕ್ ಬ್ರೈಡ್ ತೀರ್ಪಿನ ನಂತರ ಹೇಳಿದರು.

ಅಮೆರಿಕ ಸರ್ಕಾರ ಕೂಡಾ ಅಹ್ಮದ್ ಅಮೆರಿಕದಲ್ಲಿ ಇದ್ದುಕೊಂಡೇ ಇತರರನ್ನು ಭಯೋತ್ಪಾದಕ ಗುಂಪಿಗೆ ನೆರವಾಗುತ್ತಾ, ಅದಕ್ಕೆ ಸದಸ್ಯರನ್ನು ಸೇರಿಸಿ ತರಬೇತಿ ಶಿಬಿರಗಳಿಗೆ ಕಳುಹಿಸಲು ಷಡ್ಯಂತ್ರ ನಡೆಸುತ್ತಿದ್ದುದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಿತ್ತು.
 
ಲಷ್ಕರ್-ಎ-ತೊಯ್ಬಾದ ಕಮಾಂಡೋ ತರಬೇತಿ ಪೂರ್ಣಗೊಳಿಸುವ ಸಲುವಾಗಿ ಪಾಕಿಸ್ತಾನಕ್ಕೆ ಹಿಂತಿರುಗುವ ಉದ್ದೇಶವನ್ನೂ ಆತ ವ್ಯಕ್ತ ಪಡಿಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

2010ರ ಸೆಪ್ಟೆಂಬರ್ ನಲ್ಲಿ ವುಡ್ ಬ್ರಿಜ್ ಮನೆಯಲ್ಲಿದ್ದಾಗ ಎಲ್ಇಟಿ ಸ್ಥಾಪಕ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ನನ್ನು ಸಂಪರ್ಕಿಸಿದ್ದುದಾಗಿಯೂ ಅಹ್ಮದ್ ಒಪ್ಪಿಕೊಂಡಿದ್ದ.

ಜಿಹಾದ್ ಮತ್ತು ಮುಜಾಹಿದೀನ್ ಗಳನ್ನು ಬೆಂಬಲಿಸಿ ಹಫೀಜ್ ಸಯೀದ್ ಕರೆ ನೀಡುವ ಹಾಗೂ ಆತನ ಪ್ರಾರ್ಥನೆಯನ್ನು ಒಳಗೊಂಡ ವಿಡಿಯೋವನ್ನು ಸಿದ್ಧ ಪಡಿಸುವಂತೆ ಅಹ್ಮದ್ ಗೆ ತಲ್ಹಾ ಸಯೀದ್ ಮನವಿ ಮಾಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.