ADVERTISEMENT

ಸಿಂಗ್ ಆಡಳಿತದಲ್ಲಿ ಸಂಶೋಧನೆಗೆ ಅತ್ಯುತ್ತಮ ವಾತಾವರಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:30 IST
Last Updated 26 ಫೆಬ್ರುವರಿ 2012, 19:30 IST

 ವಾಷಿಂಗ್ಟನ್ (ಪಿಟಿಐ):  ಮನಮೋಹನ್ ಸಿಂಗ್ ಅವರು ಪ್ರಧಾನಿಯಾದ ಮೇಲೆ ಭಾರತವು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಕಂಡಿದೆ ಎಂದು ಹಲವಾರು ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅಮೆರಿಕದ ಪ್ರತಿಷ್ಠಿತ `ಸೈನ್ಸ್~ ನಿಯತಕಾಲಿಕದಲ್ಲಿ ಪ್ರಕಟಗೊಂಡಿರುವ ವಿಶೇಷ ಲೇಖನದಲ್ಲಿ ಈ ಬಗ್ಗೆ ಭಾರತೀಯ ವಿಜ್ಞಾನಿಗಳೂ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

`ಸೈನ್ಸ್~ ಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಭಾರತದ ವೈಜ್ಞಾನಿಕ ರಂಗಕ್ಕೆ ಸಂಬಂಧಿಸಿದಂತೆ ಮುಖಪುಟ ಲೇಖನ ಪ್ರಕಟಿಸಲಾಗಿದ್ದು, ಪ್ರಧಾನಿ ಸಿಂಗ್ ಸಂದರ್ಶನ,  ವಿಜ್ಞಾನಿಗಳ ಅಭಿಪ್ರಾಯ, ವೈಜ್ಞಾನಿಕ ರಂಗದಲ್ಲಿ ಭಾರತದ ಸಾಧನೆಯ ವಿವರಗಳನ್ನು ಅದು ಒಳಗೊಂಡಿದೆ. ಭಾರತದ ವಿಜ್ಞಾನಿಗಳಿಗೆ ಈಗ ಅತ್ಯಾಧುನಿಕ ಪ್ರಯೋಗಾಲಯ, ತಂತ್ರಜ್ಞಾನಗಳು ಲಭ್ಯವಿದೆ. ಸಿಂಗ್ ಪ್ರಧಾನಿಯಾದ ಮೇಲೆ ವೈಜ್ಞಾನಿಕ ಸಂಶೋಧನೆಗಳಿಗೆ ಬೃಹತ್ ಅನುದಾನ ನೀಡಲಾಗುತ್ತಿದೆ. ಸಂಶೋಧನೆಗೆ ಅನುಕೂಲಕರವಾದ ವಾತಾವರಣ ಇಲ್ಲಿದೆ ಎಂದು `ಸೈನ್ಸ್~ ಹೇಳಿದೆ.

ಇತ್ತೀಚೆಗಷ್ಟೇ ಸಿಂಗ್, ವೈಜ್ಞಾನಿಕ ಸಂಶೋಧನೆಗೆ ಇರುವ ಅನುದಾನದ ಮೊತ್ತವನ್ನು 2017ರ ಹೊತ್ತಿಗೆ 800 ಕೋಟಿ ಡಾಲರ್‌ಗೆ ಏರಿಸುವುದಾಗಿ ಘೋಷಿಸಿದ್ದರು. ಪ್ರಸ್ತುತ ಸರ್ಕಾರ ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗಾಗಿ 300 ಕೋಟಿ ಡಾಲರ್ ಖರ್ಚು ಮಾಡುತ್ತಿದೆ.

ಚೀನಾ ಮುಂದೆ: `ಸೈನ್ಸ್~ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಸಿಂಗ್, ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತದ ಸಾಧನೆ ಇಳಿಮುಖವಾಗುತ್ತಿದೆ. ಈ ಕ್ಷೇತ್ರದಲ್ಲಿ ಚೀನಾದಂತಹ ದೇಶಗಳು ಭಾರತವನ್ನು ಹಿಂದಕ್ಕೆ ಹಾಕಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.