ADVERTISEMENT

ಸುಧಾರಣೆಗೆ ಯುಪಿಎ ಬದ್ಧವಾಗಿದೆ -ಪ್ರಣವ್ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 7:50 IST
Last Updated 21 ಏಪ್ರಿಲ್ 2012, 7:50 IST
ಸುಧಾರಣೆಗೆ ಯುಪಿಎ ಬದ್ಧವಾಗಿದೆ -ಪ್ರಣವ್ ಮುಖರ್ಜಿ
ಸುಧಾರಣೆಗೆ ಯುಪಿಎ ಬದ್ಧವಾಗಿದೆ -ಪ್ರಣವ್ ಮುಖರ್ಜಿ   

ವಾಸಿಂಗ್ಟನ್ (ಪಿಟಿಐ): ಯುಪಿಎ ಸರ್ಕಾರ ಯಾವುದೇ ಸುಧಾರಣೆ ಮಾಡಬಾರದೆಂಬ ನಿಲುವು ತಳೆದಿದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಶನಿವಾರ ತಳ್ಳಿಹಾಕಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸರ್ಕಾರ ಸುಧಾರಣೆಗೆ ಬದ್ಧವಾಗಿದೆ ಎಂದು ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಮತ್ತು  ಪಿಟರ್ ಜಿ ಪಿಟರ್‌ಸನ್ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆ ಜಂಟಿಯಾಗಿ ಆಯೋಜಿಸಿದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು `ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಇದು ಸಕಾಲವಾಗಿದ್ದು, ಈ ವರ್ಷದಲ್ಲಿ ಪಿಂಚಣಿ, ಬ್ಯಾಕಿಂಗ್ ಮತ್ತು ವಿಮೆ ಕುರಿತಂತೆ ಮೂರು ಶಾಸನಗಳನ್ನು ಜಾರಿಗೊಳಿಸುವ ವಿಶ್ವಾಸವಿದೆ~ ಎಂದು ತಿಳಿಸಿದರು.

ಇದೇ ವೇಳೆ ಅವರು ಆರ್ಥಿಕ ಸುಧಾರಣೆ ತರಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಶಾಸಕಾಂಗ ಮತ್ತು ಆಡಳಿತಾಂಗಗಳಲ್ಲಿ ಹಲವಾರು ಬದಲಾವಣೆ ತರುವ ಪ್ರಕ್ರಿಯೆಗಳು ನಡೆದಿವೆ ಎಂದು ಹೇಳಿದರು.

`ನಾವೀಗ ಸಂಧಿಕಾಲದಲ್ಲಿರುವುದರಿಂದ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮಂಡಿಸಲಾದ ಬಜೆಟ್‌ನಲ್ಲಿ ಹಲವು ಅಂಶಗಳು ಮೂಡಿಬಂದಿವೆ~ ಎಂದು ತಿಳಿಸಿದರು.

ಮುಂದಿನ ಸಂಸತ್ ಚುನಾವಣೆಗೆ ಮುನ್ನ ದೇಶದಲ್ಲಿ ಮಹತ್ವದ ಸುಧಾರಣೆಗಳು ಆಗುವ ಸಾಧ್ಯತೆ ಇಲ್ಲ ಎಂದು ಪ್ರಧಾನಿ ಅವರ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರು ಅಮೆರಿಕದಲ್ಲಿ ನೀಡಿದ ಹೇಳಿಕೆ ಉಲ್ಲೇಖಿಸಿ ಶುಕ್ರವಾರ ವಿರೋಧ ಪಕ್ಷಗಳು ಯುಪಿಎ ಸರ್ಕಾರಕ್ಕೆ ಯಾವುದೇ ಸುಧಾರಣೆ ತರುವ ಇಚ್ಛೆ ಇಲ್ಲ ಎಂದು ಟೀಕಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.