ADVERTISEMENT

ಸೇನಾ ದಂಗೆಗೆ ಯೋಜಿಸಿರಲಿಲ್ಲ: ಪಾಶಾ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಕಳೆದ ವರ್ಷದ ಮೇ ತಿಂಗಳು ಪಾಕಿಸ್ತಾನದ ಅಬೊಟಾಬಾದ್‌ನಲ್ಲಿ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್‌ನನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿದ ನಂತರ ಸರ್ಕಾರದ ವಿರುದ್ಧ ದಂಗೆ ಏಳಲು ಸೇನೆ ಯೋಜಿಸಿರಲಿಲ್ಲ ಎಂದು ಐಎಸ್‌ಐ ಮಾಜಿ ಮುಖ್ಯಸ್ಥ ಅಹ್ಮದ್ ಶುಜಾ ಪಾಶಾ ಸ್ಪಷ್ಟಪಡಿಸಿದ್ದಾರೆ.

ಸೇನಾ ದಂಗೆ ತಡೆಯಲು ಪಾಕ್ ಸರ್ಕಾರ ಅಮೆರಿಕದ ನೆರವು ಕೋರಿದ ವಿವಾದಿತ ಮೆಮೊ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಮುಂದೆ ಹಾಜರಾಗಿ ಪಾಶಾ ಈ ಸ್ಪಷ್ಟನೆ ನೀಡಿದ್ದಾರೆ.
`ಸೇನೆಯಿಂದ ಯಾವುದೇ ದಂಗೆಯ ಯೋಜನೆ ಇರಲಿಲ್ಲ. ಅಂತಹ ಬೆದರಿಕೆ ಇದ್ದಲ್ಲಿ, ಅದು ಐಎಸ್‌ಐಗೂ ತಿಳಿದಿರುತ್ತಿತ್ತು~ ಎಂದೂ ಅವರು ತಿಳಿಸಿದ್ದಾರೆ.

`ಸೇನೆ ದಂಗೆಯೇಳಲು ಯೋಜಿಸಿತ್ತು~ ಎಂಬ ಪಾಕ್ ಮೂಲದ ಅಮೆರಿಕ ಉದ್ಯಮಿ ಮನ್ಸೂರ್ ಇಜಾನ್ ಅವರ ಹೇಳಿಕೆಯನ್ನೂ ಪಾಶಾ ತಳ್ಳಿಹಾಕಿದ್ದಾರೆ.ಆದರೆ ಲಂಡನ್‌ನಲ್ಲಿ ಇಜಾಜ್ ಅವರನ್ನು ಭೇಟಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
 
ಮೆಮೊ ಹಗರಣದ ಬಗ್ಗೆ ಇಜಾಜ್ `ಫೈನಾನ್ಶಿಯಲ್ ಎಕ್ಸ್‌ಪ್ರೆಸ್~ಗೆ ಲೇಖನ ಬರೆದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ವಿವರ ಪಡೆದಿದ್ದು, ಈ ಸಂಬಂಧ ಸೇನಾ ನಾಯಕರೊಂದಿಗೂ  ಸಮಾಲೋಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.