ವಾಷಿಂಗ್ಟನ್ (ಎಎಫ್‌ಪಿ): ಸೌರಶಕ್ತಿ ಮಹತ್ವ ಸಾರಲು ಸತತ 21ಗಂಟೆ ವಿಮಾನದಲ್ಲಿ ಯಶಸ್ವಿ ಹಾರಾಟ ನಡೆಸಿದ ಸಾಹಸ ಯಾತ್ರೆ ಇದು. ಅದು ಕೂಡ ಸೌರಶಕ್ತಿಚಾಲಿತ ವಿಮಾನದಲ್ಲಿ. ಈ ಸಾಹಸ ಪಯಣ ಕೈಗೊಂಡವರು ಸ್ವಿಟ್ಜರ್‌ಲೆಂಡ್ ಪ್ರಜೆ, ಸಾಹಸಿಗ ಬರ್ಟ್‌ರ‌್ಯಾಂಡ್ ಪಿಕಾರ್ಡ್.
ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಮಧ್ಯಾಹ್ನ 2.36ಕ್ಕೆ ಟೆಕ್ಸಾಸ್‌ನ ಡಲ್ಲಾಸ್ ಫೋರ್ಟ್ ವರ್ತ್ ವಿಮಾನ ನಿಲ್ದಾಣದಿಂದ ಪಿಕಾರ್ಡ್ ಪ್ರಯಾಣ ಆರಂಭಿಸಿದ್ದರು.
ಸತತ 21ಗಂಟೆಗಳ ಹಾರಾಟದ ನಂತರ ಮಂಗಳವಾರ ಬೆಳಿಗ್ಗೆ 11.57ಕ್ಕೆ ಮಿಸೌರಿಯ ಸೇಂಟ್ ಲೂಯಿಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದರು.
ಪ್ರಯಾಣದ ಅವಧಿಯಲ್ಲಿ ಕೇವಲ ಐದು ಕಡೆಗಳಲ್ಲಿ ಮಾತ್ರ ವಿಮಾನ ಕೆಳಗಿಳಿಸಿದ್ದರು. ವಿಮಾನ ಇಳಿಯುವ ಕ್ಷಣವನ್ನು ಸಂಘಟಕರ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.
`ಆಕಾಶದಲ್ಲಿ ಸುದೀರ್ಘ ಪ್ರಯಾಣ ನಡೆಸಿ ಬಂದ ನನಗೆ ಮತ್ತೊಂದು ಲೋಕದಿಂದ ಬಂದಂತಹ ಅನುಭವವಾಗಿದೆ' ಎಂದು ಪಿಕಾರ್ಡ್ ಸುದ್ದಿಗಾರರಿಗೆ ತಿಳಿಸಿದರು. 2015ರಲ್ಲಿ ಸೌರಶಕ್ತಿಚಾಲಿತ ವಿಮಾನದಲ್ಲಿ ಇಡೀ ಜಗತ್ತು ಸುತ್ತುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ. ಈ ವಿಮಾನವು ನಾಲ್ಕು ಎಲೆಕ್ಟ್ರಿಕ್ ಎಂಜಿನ್‌ಗಳನ್ನು ಹೊಂದಿದ್ದು, ಒಬ್ಬ ಪೈಲಟ್ ಮಾತ್ರ ಈ ವಿಮಾನ ಹಾರಾಟ ನಡೆಸಬಹುದು.
ಇದರ ರೆಕ್ಕೆಗಳ ಉದ್ದ 63 ಮೀಟರ್. ವಿಶಿಷ್ಟ ಸಾಹಸದ ಮೂಲಕ ಸೌರಶಕ್ತಿಯಿಂದ ಸುದೀರ್ಘ ಅವಧಿವರೆಗೆ ವಿಮಾನ ಹಾರಾಟ ನಡೆಸಬಹುದು ಎಂದು ಪಿಕಾರ್ಡ್ ತೋರಿಸಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.