ADVERTISEMENT

ಸ್ತನ ಕ್ಯಾನ್ಸರ್‌ಗೆ ನೋವಿಲ್ಲದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಲಂಡನ್ (ಪಿಟಿಐ): ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೊಂದು ಆಶಾದಾಯಕ ಸುದ್ದಿ...!
ಸ್ತನಕ್ಯಾನ್ಸರ್‌ನಿಂದ ದೇಹದಲ್ಲಿ ಉಂಟಾಗುವ ಗೆಡ್ಡೆಗಳನ್ನು ನೋವಿಲ್ಲದೇ ತೆಗೆಯುವಂಥ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

`ಈ ತಂತ್ರಜ್ಞಾನದಲ್ಲಿ ಸ್ತನಕ್ಯಾನ್ಸರ್‌ಗೆ ಕಾರಣವಾಗುವ ಗೆಡ್ಡೆಗಳನ್ನು ಸುಟ್ಟು ನಾಶಗೊಳಿಸುವ ಬದಲು ಅತ್ಯಂತ ಶೀತಯುಕ್ತ (ಸೂಪರ್‌ಕೋಲ್ಡ್) ಸೂಜಿಯ ತುದಿಯಿಂದ ಕರಗಿಸಬಹುದು. ಇದರಿಂದ ದ್ವಿಗುಣಗೊಳ್ಳುವ ಕ್ಯಾನ್ಸರ್ ಕೋಶಗಳನ್ನು ಸಾಯಿಸಬಹುದು' ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ನೂತನ ತಂತ್ರಜ್ಞಾನಕ್ಕೆ ಬಳಸುವ ಸೂಜಿಯನ್ನು ಮೈನಸ್ 170 ಡಿಗ್ರಿಗಳಷ್ಟು ತಂಪಾಗಿಸಲಾಗುತ್ತದೆ. ಅತಿಸೂಕ್ಷ್ಮ ಸರಣಿ ಟ್ಯೂಬ್‌ಗಳ ಮೂಲಕ ದ್ರವರೂಪಿ ನೈಟ್ರೋಜನ್ ಅನ್ನು ಪೂರೈಸಲಾಗುತ್ತದೆ. ದೇಹದೊಳಗಿನ ಗೆಡ್ಡೆಯನ್ನು ಸಂಪೂರ್ಣವಾಗಿ ಕರಗಿಸಲು ಅನುಕೂಲವಾಗುವಷ್ಟರ ಮಟ್ಟಿಗೆ ಶೀತವನ್ನು ಕಾಪಾಡಲಾಗುತ್ತದೆ.

ಈ ತಂತ್ರಜ್ಞಾನ ಬಳಸುವಾಗ ರೋಗಿಗಳಿಗೆ ಅರವಳಿಕೆ ನೀಡುವ ಅಗತ್ಯವಿಲ್ಲ. ಜೊತೆಗೆ ಕೇವಲ ಹದಿನೈದು ನಿಮಿಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ನೂತನ ತಂತ್ರಜ್ಞಾನವು ಪ್ರಸ್ತುತ ಚಾಲ್ತಿಯಲ್ಲಿರುವ ಹಲವು ಮಾದರಿ ಚಿಕಿತ್ಸೆಗಳಿಗೆ ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಉತ್ತಮ ಪರ್ಯಾಯವಾಗಲಿದೆ. ಈ ಚಿಕಿತ್ಸೆ ಪಡೆಯಲು ಸ್ತನಕ್ಯಾನ್ಸರ್‌ಗೆ ಒಳಗಾಗಿರುವವರು ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಬೇಕು.

ಕ್ಯಾನ್ಸರ್ ಗೆಡ್ಡೆ `ಗಾಲ್ಫ್ ಚಂಡಿನ' ಗಾತ್ರದವರೆಗೆ ಬೆಳೆದಿದ್ದರೂ ಈ ತಂತ್ರಜ್ಞಾನದ ಮೂಲಕ ಕರಗಿಸಬಹುದಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.
`ಮಾನವನ ದೇಹದಲ್ಲಿರುವ ಕೋಶಗಳಲ್ಲಿ ಬಹುತೇಕ ನೀರು ತುಂಬಿರುತ್ತದೆ. ಹಾಗಾಗಿ ಅವುಗಳನ್ನು ಹೆಪ್ಪುಗಟ್ಟಿಸಬಹುದಾಗಿದೆ ಎನ್ನುತ್ತಾರೆ ನೂತನ ತಂತ್ರಜ್ಞಾನ ಆವಿಷ್ಕರಿಸಿರುವ ಇಸ್ರೇಲ್ ಮೂಲದ ಐಸ್‌ಕ್ಯೂರ್ ಮೆಡಿಕಲ್ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಹೆಜಿ ಹಿಮ್ಮೆಲ್‌ಫಾರ್ಬ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.