ADVERTISEMENT

ಸ್ತನ ಕ್ಯಾನ್ಸರ್ ಪತ್ತೆಗೆ ಸರಳ ರಕ್ತ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 19:30 IST
Last Updated 6 ಜೂನ್ 2012, 19:30 IST

ಹೂಸ್ಟನ್ (ಪಿಟಿಐ): ಒಂದು ಸರಳ ರಕ್ತ ಪರೀಕ್ಷೆ,  ಇದರಿಂದ ವ್ಯಕ್ತಿಯೊಬ್ಬರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವುದನ್ನು ಆರಂಭದಲ್ಲೇ ಪತ್ತೆ ಹಚ್ಚಬಹುದು. ಅಷ್ಟೇ ಅಲ್ಲ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ವ್ಯಕ್ತಿಗೆ ಮತ್ತೆ ಆ ರೋಗ ಮರುಕಳಿಸುತ್ತದೆಯೋ ಇಲ್ಲವೋ ಎಂಬುದನ್ನು ಈ ಪರೀಕ್ಷೆಯಿಂದ ಅಂದಾಜಿಸಬಹುದು.

ಇಂಥದ್ದೊಂದು ರಕ್ತ ಪರೀಕ್ಷಾ ವಿಧಾನವನ್ನು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ `ಆಂಡರ್‌ಸನ್ ಕ್ಯಾನ್ಸರ್ ಸೆಂಟರ್~ನ ವಿಜ್ಞಾನಿಗಳು ರೂಪಿಸುತ್ತಿದ್ದಾರೆ.

ಕ್ಯಾನ್ಸರ್ ಕಣಗಳು ಸಾಮಾನ್ಯವಾಗಿ ರಕ್ತ ಪರಿಚಲನಾ ವ್ಯೆಹದ ಭಾಗವಾಗಿರುವ ದುಗ್ಧನಾಳ ವ್ಯವಸ್ಥೆಯ ಮೂಲಕ ದೇಹದಲ್ಲಿ ಪಸರಿಸುತ್ತವೆ.

ಪ್ರಸ್ತುತ ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ದುಗ್ಧಗ್ರಂಥಿಗಳನ್ನು ದೇಹದಿಂದ ಹೊರತೆಗೆದು ಪರೀಕ್ಷಿಸಲಾಗುತ್ತದೆ. ಇದರಿಂದ ಅಡ್ಡ ಪರಿಣಾಮಗಳೂ ಆಗುತ್ತವೆ.

ಇಂತಹ ಸಂಕೀರ್ಣ ಪರೀಕ್ಷಾ ವಿಧಾನಕ್ಕಿಂತ ರಕ್ತ ಪ್ರವಾಹದಲ್ಲಿ ಮುಕ್ತವಾಗಿ ಸಂಚರಿಸುವ ಕ್ಯಾನ್ಸರ್ ಕಣಗಳನ್ನು (ಸರ್ಕ್ಯುಲೇಟಿಂಗ್ ಟ್ಯೂಮರ್ ಸೆಲ್ಸ್) ಪತ್ತೆಹಚ್ಚಿ ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.