ಕರಾಚಿ (ಪಿಟಿಐ): ದಶಕಗಳ ಕಾಲ ಭಾರತ ಮತ್ತು ಪಾಕಿಸ್ತಾನದ ಕೋಟ್ಯಂತರ ಸಂಗೀತ ಪ್ರೇಮಿಗಳಿಗೆ ಗಜಲ್ ರಸದೌತಣ ಉಣ ಬಡಿಸಿದ್ದ ಗಜಲ್ ಮಾಂತ್ರಿಕ ಮೆಹ್ದಿ ಹಸನ್ ಅವರ ಮಧುರ ಕಂಠ ಸ್ತಬ್ಧಗೊಂಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಹಸನ್, ದೀರ್ಘ ಕಾಲದ ಅನಾರೋಗ್ಯದಿಂದ ತಮ್ಮ 84ನೇ ವಯಸ್ಸಿನಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದರು.
ವಿಶಿಷ್ಟ ಕಂಠಸಿರಿಯಿಂದ ಉಭಯ ದೇಶಗಳಲ್ಲಿ ಮನೆಮಾತಾಗಿದ್ದ ಹಸನ್, ದೇಶ, ಗಡಿಗಳನ್ನು ದಾಟಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಅನೇಕ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ತೀರಾ ಬಿಗಡಾಯಿಸಿತ್ತು.
ವಿವಿಧ ಅಂಗಾಂಗಳು ಸುಗಮವಾಗಿ ಕಾರ್ಯನಿರ್ವಹಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೃತಕ ಉಸಿರಾಟ ನೀಡಲಾಗಿತ್ತು. ಬುಧವಾರ ಮಧ್ಯಾಹ್ನ 12.20ಕ್ಕೆ ಆಗಾಖಾನ್ ಆಸ್ಪತ್ರೆಯಲ್ಲಿ ತಮ್ಮ ತಂದೆ ಕೊನೆಯುಸಿರೆಳೆದರು ಎಂದು ಅವರ ಪುತ್ರ ಆರಿಫ್ ಹಸನ್ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಲೇ ಆಸ್ಪತ್ರೆ ಎದುರು ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತು. `ಹಸನ್, ಸಂಗೀತದ ಮೇರು ಪರ್ವತವಾಗಿದ್ದರು~ ಎಂದು ಪ್ರಧಾನಿ ಯುಸೂಫ್ ರಜಾ ಗಿಲಾನಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜಸ್ತಾನ ಮೂಲ...
ಹಸನ್ ಮೂಲತಃ ಭಾರತೀಯ. ಹುಟ್ಟಿದ್ದು (1927) ರಾಜಸ್ತಾನದ ಲುಣಾ ಗ್ರಾಮದ ಬಡ ಕುಟುಂಬದಲ್ಲಿ. ಬಡತನ ಸಂಗೀತ ಆರಾಧನೆಗೆ ಅಡ್ಡಿಯಾಗಿರಲೇ ಇಲ್ಲ. ಮನೆಯೇ ಸಂಗೀತದ ಮೊದಲ ಪಾಠಶಾಲೆ. ತಂದೆ ಉಸ್ತಾದ್ ಅಜೀಮ್ ಖಾನ್ ಮತ್ತು ಚಿಕ್ಕಪ್ಪ ಉಸ್ತಾದ್ ಇಸ್ಮಾಯಿಲ್ ಖಾನ್ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರು. ದೇಶ ವಿಭಜನೆ ಕಾಲಕ್ಕೆ ಹಸನ್ ಸಂಪ್ರದಾಯಸ್ಥ ಕುಟುಂಬ ಪಾಕಿಸ್ತಾನಕ್ಕೆ ತೆರಳಿತ್ತು. ಆಗ ಅವರಿಗೆ 20ರ ತುಂಬು ಪ್ರಾಯ.
ಜೀವನ ನಿರ್ವಹಣೆಗಾಗಿ ಸೈಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಬಾಲಕ ಹಸನ್‌ಗೆ ಸಂಗೀತದ ಗೀಳು. ಸೈಕಲ್ ಅಂಗಡಿಯಲ್ಲಿಯೇ ರಿಯಾಜ್ (ಸಂಗೀತ ಅಭ್ಯಾಸ) ನಡೆಸುತ್ತಿದ್ದ. 1957ರಲ್ಲಿ ಪಾಕಿಸ್ತಾನದ ರೇಡಿಯೊದಲ್ಲಿ ಹಾಡಲು ಅವಕಾಶ ದೊರೆಯಿತು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.
ದ್ರುಪದ್ ಮತ್ತು ಖ್ಯಾಲ್‌ನಲ್ಲಿ ಪರಿಣತರಾಗಿದ್ದ ಹಸನ್, ಬಾಲ್ಯದಲ್ಲಿಯೇ ಸಹೋದರನೊಂದಿಗೆ ಸಂಗೀತ ಕಛೇರಿ ನೀಡಿ ತಮ್ಮ ಪ್ರತಿಭೆ ಅನಾವರಣ ಮಾಡಿದ್ದರು. ಆರಂಭದಲ್ಲಿ ಟುಮ್ರಿ ಗಾಯಕರಾಗಿದ್ದ ಅವರು ನಂತರ ಗಜಲ್ ಗಾಯಕರಾಗಿ ಪ್ರಸಿದ್ಧಿಗೆ ಬಂದರು. ಪದೇ ಪದೇ ಕಾಡುತ್ತಿದ್ದ ಅನಾರೋಗ್ಯದಿಂದಾಗಿ 80 ದಶಕದ ಕೊನೆ, ಕೊನೆಗೆ ಗಾಯನವನ್ನು ನಿಲ್ಲಿಸಿದ್ದರು. ಅಲ್ಲಿಯವರೆಗೂ ಅವರು ರಿಯಾಜ್ (ಸಂಗೀತ ಅಭ್ಯಾಸ) ನಿಲ್ಲಿಸಿರಲಿಲ್ಲ.
ಒಂದು ಕಾಲಕ್ಕೆ ಹಸನ್ ಹಾಡಿಲ್ಲದ ಸಿನಿಮಾ ಅಪೂರ್ಣ ಎಂಬ ಮಾತು ಪಾಕಿಸ್ತಾನದಲ್ಲಿ ಜನಜನಿತವಾಗಿತ್ತು. ಇದು ಅವರ ಜನಪ್ರಿಯತೆಗೆ ಸಂದ ಗೌರವ. ಹಲವು ಬಾರಿ ಭಾರತಕ್ಕೆ ಬಂದು ಹೋಗಿದ್ದ ಅವರು ಇಲ್ಲಿಯೂ ಅನೇಕ ಅಭಿಮಾನಿಗಳನ್ನು ಗಳಿಸಿದ್ದರು. ಅಭಿಮಾನಿಗಳು ಅವರಿಗೆ `ಶೆಹನ್‌ಶಾ-ಏ-ಗಜಲ್~ (ಗಜಲ್ ರಾಜ್) ಎಂಬ ಪ್ರೀತಿಯ ಬಿರುದು ನೀಡಿದ್ದರು.
ಸುಮಾರು 12 ವರ್ಷಗಳ ಹಿಂದೆ (2000) ಭಾರತದಲ್ಲಿ ನಡೆಸಿದ್ದ ಸಂಗೀತ ಕಛೇರಿಯೇ ಕೊನೆ.
ಹಸನ್, ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದು ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗಲು ಬಯಸಿದ್ದರು. ಕೊನೆಗೂ ಆ ಆಸೆ ಈಡೇರಲೇ ಇಲ್ಲ...
ಲತಾ-ಹಸನ್ ಯುಗಳ ಗೀತೆ...
ಹಸನ್ ಧ್ವನಿಗೆ ಲತಾ ಮಾರು ಹೋಗಿದ್ದರು. ಹೀಗಾಗಿಯೇ ಅವರನ್ನು `ದೈವೀ ಕಂಠದ ಗಾಯಕ~ ಎಂದು ಬಣ್ಣಿಸುತ್ತಿದ್ದರು.
2010ರಲ್ಲಿ ಬಿಡುಗಡೆಯಾದ `ಸರಹದೇ~ ಹಿಂದಿ ಚಿತ್ರದಲ್ಲಿ ಲತಾ ಮಂಗೇಶ್ಕರ್ ಜತೆಗೂಡಿ ಹಾಡಿದ `ತೇರಾ ಮಿಲನ್~ ಗೀತೆಯೇ ಅವರ ಪ್ರಥಮ ಮತ್ತು ಕೊನೆಯ ಯುಗಳ ಗೀತೆಯಾಗಿತ್ತು. `ಅಬ್ ಕೆ ಹಮ್ ಬಿಚಡೆ ತೊ ಶಾಯದ್ ಕಭೀ ಖ್ವಾಬೊ ಮೆ ಮಿಲೇ...~ (ಒಂದು ವೇಳೆ ಈಗ ನಾವು ಬೇರೆಯಾದರೂ ಕನಸಿನಲ್ಲದಾರೂ ಸೇರಬಹುದು..) `ದಿಲ್ ಏ ನಾದಾನ್ ತುಜೆ ಹುವಾ ಕ್ಯಾ ಹೈ...~, `ದಿಲ್ ಕಿ ಬಾತ್ ಲಬೊ ಪರ್ ಲಾಕರ್...~ ಮುಂತಾದ ಗೀತೆಗಳನ್ನು ಇಂದಿಗೂ ಎಲ್ಲರೂ ಗುನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.