ADVERTISEMENT

ಹಖಾನಿ ಭದ್ರತೆ: ಆತಂಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ನ್ಯೂಯಾರ್ಕ್ (ಪಿಟಿಐ): ಅಮೆರಿಕಾದಲ್ಲಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಖಾನಿ ಅವರಿಗೆ  ಜೀವಬೆದರಿಕೆ ಇದೆ ಎಂದು ಅಮೆರಿಕಾದ ಹಲವು ಪ್ರಸಿದ್ಧ ವಿದ್ವಾಂಸರು ಅಮೆರಿಕಾದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ಗೆ ಬರೆದ ಪತ್ರದಲ್ಲಿ ಆತಂಕ ವ್ಯಕ್ತ ಪಡಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಹಲವು ರಹಸ್ಯಗಳನ್ನು ಹೊರಗೆಡವಿದ ಮೆಮೊ ಹಗರಣದ ಹಿನ್ನೆಲೆಯಲ್ಲಿ  ಹಖಾನಿ ಅವರು ಇದೀಗ ಪ್ರಾಣ ಭಯದಿಂದಿದ್ದಾರೆ.

ಅವರು ಪ್ರಸಕ್ತ ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ಮನೆಯಲ್ಲಿದ್ದಾರೆ. ಮಾಜಿ ಪತ್ರಕರ್ತರೂ, ಬಾಸ್ಟನ್ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕರೂ ಆಗಿರುವ ಇವರು ಈಚೆಗೆ `ನ್ಯೂಯಾರ್ಕ್ ಟೈಮ್ಸ~ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ `ಪ್ರಧಾನಿ ಮನೆಯೊಳಗಿದ್ದರೂ ನನ್ನ ಮಟ್ಟಿಗೆ ಇದೊಂದು ಗೃಹಬಂಧನವೇ ಸರಿ~ ಎಂದು ನುಡಿದಿದ್ದಾರೆ. 

 `ಈಗಾಗಲೇ ಪಾಕ್‌ನಲ್ಲಿ ಅಮೆರಿಕಾ ವಿರೋಧಿ ವಾತಾವರಣ ತಾರಕಕ್ಕೇರಿದ್ದು, ನನ್ನ ರಕ್ಷಣೆಗೆ ನಿಂತಿರುವ ಭದ್ರತಾ ಸಿಬ್ಬಂದಿಯೇ ತನ್ನ ಬಂದೂಕನ್ನು ನನ್ನೆಡೆಗೆ ಗುರಿ ಇಟ್ಟರೂ ಅಚ್ಚರಿ ಏನಿಲ್ಲ~ ಎಂದು ನುಡಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಹಖಾನಿಯವರಿಗೆ ಯಾವುದೇ ತೊಂದರೆಯಾಗದಂತೆ ಶಕ್ತಿಮೀರಿ ಪ್ರಯತ್ನಿಸಬೇಕೆಂದು ಬ್ರೂಕಿಂಗ್ಸ್ ಸಂಸ್ಥೆ, ಅಂತರರಾಷ್ಟ್ರೀಯ ಶಾಂತಿಗಾಗಿ ಇರುವ ಕಾರ್ನೆಗಿ ಪ್ರತಿಷ್ಠಾನ ಸೇರಿದಂತೆ ಅಮೆರಿಕಾದ ಪ್ರಮುಖ ಸಂಸ್ಥೆಗಳ ಗಣ್ಯರು ಅಮೆರಿಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಗಿಲಾನಿ ಅಸಮಾಧಾನ:  ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕ ಹೇಳಿಕೆಗಳನ್ನು ನೀಡಿರುವುದಕ್ಕೆ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.