ADVERTISEMENT

ಹಜಾರೆ ಬಂಧನ ಅವಿವೇಕಿ ಕ್ರಮ: ಅಮೆರಿಕ ಕಾಂಗ್ರೆಸ್ ವರದಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:05 IST
Last Updated 14 ಸೆಪ್ಟೆಂಬರ್ 2011, 9:05 IST

ವಾಷಿಂಗ್ಟನ್ (ಪಿಟಿಐ): ಅಣ್ಣಾ ಹಜಾರೆ ಅವರನ್ನು ಬಂಧಿಸುವ ಮೂಲಕ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅವಿವೇಕಿ ಹಾಗೂ ಪ್ರಜಾಸತ್ತೆ ವಿರೋಧಿಯಂತೆ ವರ್ತಿಸಿತು ಎಂದ ಅಮೆರಿಕ ಕಾಂಗ್ರೆಸ್ ನ ಸಂಶೋಧನಾ ಸೇವೆ (ಸಿಆರ್ಎಸ್) ವರದಿ ಅಭಿಪ್ರಾಯಪಟ್ಟಿದೆ.

~ಭಾರತ: ದೇಶೀಯ ವಿಷಯಗಳು, ಧೋರಣಾ ನೀತಿಗಳು ಮತ್ತು ಅಮೆರಿಕ ಬಾಂಧವ್ಯ~ ಕುರಿತ ತನ್ನ ವರದಿಯಲ್ಲಿ ಈ ಅಭಿಪ್ರಾಯ ನೀಡಿರುವ ವರದಿ ಭಾರತದ ಭ್ರಷ್ಟಾಚಾರ ವಿರೋಧಿ ಚಳವಳಿ ಬಗ್ಗೆ ವಿವರವಾದ ಮಾಹಿತಿ ನೀಡಿದೆ.

ಬೆಳಕಿಗೆ ಬಂದ ಹಲವಾರು ಹಗರಣಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವರ್ಚಸ್ಸಿಗೆ ಕುಂದು ತಂದಿದ್ದು, 2014ರ ಚುನಾವಣೆಗೆ ವಿರೋಧಿ ಬಿಜೆಪಿಯ ಸ್ಥಿತಿ ಉತ್ತಮವಾಗಿರುತ್ತದೆ ಎಂದು ಹೇಳಿದೆ.

ಅಮೆರಿಕನ್ ಕಾಂಗ್ರೆಸ್ ನ ಸ್ವತಂತ್ರ ವಿಭಾಗವಾಗಿರುವ ಸಿಆರ್ ಎಸ್ ಅಮೆರಿಕದ ಶಾಸನಕರ್ತರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಲ ಕಾಲಕ್ಕೆ ಇಂತಹ ವರದಿಗಳನ್ನು ತಯಾರಿಸುತ್ತದೆ.

94 ಪುಟಗಳ ಈ ವರದಿಯನ್ನು ಅಮೆರಿಕನ್ ಶಾಸನ ಕರ್ತರು ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡಿದ್ದು ಒಂದು ಪ್ರತಿಯನ್ನು ಅಮೆರಿಕ ವಿಜ್ಞಾನಿಗಳ ಒಕ್ಕೂಟ ಮಂಗಳವಾರ ಬಿಡುಗಡೆ ಮಾಡಿದೆ.

2011ರ ವಸಂತಕಾಲದ ವೇಳೆಗೆ ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳು ಬಹಿರಂಗಗೊಂಡದ್ದರಿಂದ  ಹಬ್ಬಿದ ನಕಾರಾತ್ಮಕ ಭಾವನೆಗಳು ವ್ಯಾಪಕ ಸ್ವರೂಪ ತಾಳುವ ಸಂಭವ ಇದೆ. ಬಾಬಾ ರಾಮದೇವ್ ಮತ್ತು ಅಣ್ಣಾ ಹಜಾರೆ ಇಂತಹ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ ಎಂದು ವರದಿ ಹೇಳಿದೆ.

ಜೂನ್ ಆರಂಭದಲ್ಲಿ ಯೋಗಗುರು ಬಾಬಾ ರಾಮದೇವ್ ಅವರು ಕಪ್ಪುಹಣವನ್ನು ಸ್ವದೇಶಕ್ಕೆ ತರಲು ಆಗ್ರಹಿಸಿ ನಡೆಸಿದ ಸಾಮೂಹಿಕ ನಿರಶನವನ್ನು ಪ್ರಸ್ತಾಪಿಸಿದ ವರದಿ ಆ ಸಂದರ್ಭದ ಪೊಲೀಸ್ ಬಲಪ್ರಯೋಗದ ಘಟನಾವಳಿಗಳನ್ನು ವಿವರವಾಗಿ ದಾಖಲಿಸಿದೆ.

ಶಾಂತ ಪ್ರತಿಭಟನಕಾರರ ಮೇಲೆ ಪೊಲೀಸರು ರಾತ್ರಿ ನಡೆಸಿದ ಬಲಪ್ರಯೋಗದ ಕಾರ್ಯಾಚರಣೆಯಲ್ಲಿ ಕನಿಷ್ಠ 30 ಮಂದಿ ಗಾಯಗೊಂಡಿದ್ದು, ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಯಿತು ಎಂಬುದನ್ನೂ ವರದಿ ಉಲ್ಲೇಖಿಸಿದೆ.

ರಾಮದೇವ್ ನೇತೃತ್ವದ ಪ್ರತಿಭಟನೆಗೂ ಎರಡು ತಿಂಗಳು ಮೊದಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಜನಲೋಕಪಾಲ ಕಾನೂನು ಜಾರಿಗೆ ಆಗ್ರಹಿಸಿ ಆಮರಣ ನಿರಶನದ ಪ್ರತಿಜ್ಞೆಗೈದರು. ರಾಷ್ಟ್ರದಾದ್ಯಂತ ಲಕ್ಷಾಂತರ ಜನ ಹಜಾರೆ ಅವರನ್ನು ಬೆಂಬಲಿಸಿ ಪ್ರದರ್ಶನಗಳನ್ನು ನಡೆಸಿದರು. ವಾರದ ಬಳಿಕ ಕರಡು ಲೋಕಪಾಲ ಮಸೂದೆ ರೂಪಿಸಲು ಸಮಿತಿ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರೊಂದಿಗೆ ಹಜಾರೆ ತಮ್ಮ ಚಳವಳಿ ಸ್ಥಗಿತಗೊಳಿಸಿದರು.

ಜನಾಭಿಪ್ರಾಯ ಸಂಗ್ರಹಗಳು ನಾಗರಿಕ ಸಮಿತಿ ರೂಪಿಸಿದ ಜನಲೋಕಪಾಲ ಮಸೂದೆ ಪರ ಶೇಕಡಾ 80-90ರಷ್ಟು ಜನ ಇದ್ದಾರೆ ಎಂಬುದನ್ನು ಬಹಿರಂಗ ಪಡಿಸಿದೆ ಎಂದೂ ಸಿಆರ್ಎಸ್ ವರದಿ ಹೇಳಿದೆ.

ಮುಂಬರುವ 2014ರ ಚುನಾವಣೆ ವೇಳೆಗೆ ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ಅವರ ಮಧ್ಯೆ ಚುನಾವಣಾ ಸಮರ ನಡೆಯುವ ಸಾಧ್ಯತೆ ಇದೆ ಎಂದೂ ಹೇಳಿರುವ ವರದಿ ಪರಿಣಾಮಕಾರಿ ಆಡಳಿತಕ್ಕೆ ಗುಜರಾತ್ ಅತ್ಯುತ್ತಮ ಉದಾಹರಣೆ ಎಂದೂ ಶ್ಲಾಘಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.