ಬೀಜಿಂಗ್ (ಪಿಟಿಐ): ಅಮೆರಿಕದ ಬೇಹುಗಾರಿಕೆ ಮಾಹಿತಿ ಸೋರಿಕೆ ಮಾಡಿದ ಆರೋಪ ಹೊತ್ತಿರುವ ಎಡ್ವರ್ಡ್ ಸ್ನೋಡೆನ್ ಬುಧವಾರ ಇಲ್ಲಿ ತಮ್ಮ ಹಸ್ತಾಂತರಕ್ಕೆ ಅಮೆರಿಕ ನಡೆಸುವ ಯಾವುದೇ ಯತ್ನದ ವಿರುದ್ಧ ಹೋರಾಡುವುದಾಗಿ ತಿಳಿಸಿದ್ದಾರೆ.
ಅಲ್ಲದೆ ವಾಷಿಂಗ್ಟನ್‌ನ ಬೇಹುಗಾರಿಕೆ ಹಾಗೂ ಚೀನಾ ಮೇಲಿನ ಸೈಬರ್ ದಾಳಿಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಬಹಿರಂಗಪಡಿಸಿರುವುದಾಗಿಯೂ ಹೇಳಿದ್ದಾರೆ.
`ನಾನು ಹಾಂಕಾಂಗ್‌ನಲ್ಲಿ ಅವಿತುಕೊಳ್ಳಲು ಬಂದಿರುವುದಾಗಿ ಕೆಲವರು ಭಾವಿಸಿದ್ದು, ಆದರೆ ಅಮೆರಿಕದ ಅಪರಾಧ ಮನೋಭಾವನೆಯನ್ನು ಬಯಲು ಮಾಡಲು ಇಲ್ಲಿಗೆ ಬಂದಿದ್ದೇನೆ' ಎಂದು ಸ್ನೋಡೆನ್ ಅಜ್ಞಾತ ಸ್ಥಳವೊಂದರಿಂದ ದಕ್ಷಿಣ ಚೀನಾ `ಮಾರ್ನಿಂಗ್ ಪೋಸ್ಟ್'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವರದಿಯೊಂದರ ಪ್ರಕಾರ, ಸ್ನೋಡೆನ್ ವಿರುದ್ಧ ಅಪರಾಧ ತನಿಖೆ ನಡೆಸಲು ಅಮೆರಿಕ ಮುಂದಾಗಿದ್ದು, ಆದರೆ ಈವರೆಗೂ ಹಾಂಕಾಂಗ್‌ನಲ್ಲಿರುವ ಆತನ ಹಸ್ತಾಂತರಕ್ಕೆ ಯಾವುದೇ ಮನವಿಯನ್ನು ಸಲ್ಲಿಸಿಲ್ಲ.
ವಾಷಿಂಗ್ಟನ್ ವರದಿ: ಗ್ರಾಹಕರ ದೂರವಾಣಿ ದಾಖಲಾತಿಗಳು ಮತ್ತು ಅಂತರ್ಜಾಲ ಬಳಕೆದಾರರ ವೈಯಕ್ತಿಕ ವಿವರ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ರಹಸ್ಯ ಕಾರ್ಯಾಚರಣೆಯ ಬಗ್ಗೆ ಅಮೆರಿಕದ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬೇಹುಗಾರಿಕೆ ಸಂಸ್ಥೆಗಳ ಈ ಕಾರ್ಯವನ್ನು ಅಂತ್ಯಗೊಳಿಸುವಂತೆ ಒತ್ತಾಯಿಸಿದ್ದಾರೆ.
ಬೇಹುಗಾರಿಕೆ ಕಾರ್ಯಕ್ರಮದ ವಿರುದ್ಧ ಎದ್ದಿರುವ ಗದ್ದಲವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಎಫ್‌ಬಿಐ ತಂಡ, ಕಾನೂನು ಮತ್ತು ಗುಪ್ತಚರ ಅಧಿಕಾರಿಗಳು ಸಂಸತ್‌ಗೆ ವಿವರಣೆ ಸಲ್ಲಿಸಿದ್ದಾರೆ.
ಅಂತರ್ಜಾಲ ಸಂಸ್ಥೆಗಳ ಮನವಿ: ಅಮೆರಿಕದ ರಹಸ್ಯ ಮಾಹಿತಿ ಸಂಗ್ರಹ ಕಾರ್ಯಕ್ರಮ ಭಾರಿ ವಿವಾದ ಹುಟ್ಟುಹಾಕಿರುವುದರ ನಡುವೆಯೇ ಗೂಗಲ್, ಫೇಸ್‌ಬುಕ್, ಮೈಕ್ರೊಸಾಫ್ಟ್, ಟ್ವಿಟರ್ ಮತ್ತಿತರ ಜಾಗತಿಕ ಖ್ಯಾತಿಯ ಅಂತರ್ಜಾಲ ಸಂಸ್ಥೆಗಳು ತಮ್ಮ ಮೇಲೆ ನಿರ್ಬಂಧ ಹೇರಿರುವ ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಗುಪ್ತಚರ ಕಾನೂನನ್ನು ಸ್ಥಗಿತಗೊಳಿಸುವಂತೆ ಪತ್ರ ಮುಖೇನ ಆಗ್ರಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.