ADVERTISEMENT

ಹುಸೇನ್ ಹಖಾನಿಗೆ ಕಿರುಕುಳ: ಅಮೆರಿಕ ಸೆನೆಟ್ ಸದಸ್ಯರ ಆತಂಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಖಾನಿ ಅವರನ್ನು ಸೇಡು ತೀರಿಸಿಕೊಳ್ಳಲು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕದ ಮೂವರು ಸೆನೆಟ್ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಮೆಮೊಗೇಟ್ ಹಗರಣದ ಟಿಪ್ಪಣಿಯನ್ನು ಹಖಾನಿ ಸಿದ್ಧಪಡಿಸಿದ್ದರು ಎಂಬ ಕಾರಣಕ್ಕೆ ಆ ಬಗ್ಗೆ ವಿವರಣೆ ನೀಡಲು ಸ್ವದೇಶಕ್ಕೆ ವಾಪಸ್ ಕರೆಯಿಸಿಕೊಂಡು ರಾಯಭಾರಿ ಹುದ್ದೆಯಿಂದ ವಜಾ ಮಾಡಲಾಗಿದೆ.

ನಂತರ ಅವರ ಪ್ರವಾಸದ ಮೇಲೆ ನಿಷೇಧ ಹೇರಿ ಕಿರುಕುಳ ನೀಡಲಾಗುತ್ತಿದೆ ಎಂದು ಸೆನೆಟ್ ಸದಸ್ಯರಾದ ಜಾನ್ ಮ್ಯಾಕೈನ್, ಜೋಸೆಫ್ ಲೈಬರ್‌ಮ್ಯಾನ್ ಮತ್ತು ಮಾರ್ಕ್ ಕಿರ್ಕ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೊಮೊಗೇಟ್ ಹಗರಣದ ತನಿಖೆಗಾಗಿ ನೇಮಕಗೊಂಡಿರುವ ಪಾಕಿಸ್ತಾನ ನ್ಯಾಯಾಂಗ ಆಯೋಗವು ಹಖಾನಿ, ಐಎಸ್‌ಐ ಮುಖ್ಯಸ್ಥ ಲೆ. ಜ. ಶುಜಾ ಪಾಷಾ, ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ. ಜೇಮ್ಸ ಜಾನ್ ಅವರಿಗೆ ಸಮನ್ಸ್ ನೀಡಿ ಹೇಳಿಕೆ ನೀಡಲು ಹಾಜರಾಗುವಂತೆ ಸೂಚಿಸಿದೆ.

ಈ ಮಧ್ಯೆ ಹಖಾನಿ ಹೇಳಿಕೆ ನೀಡಿ ತಮ್ಮ ವಿರುದ್ಧದ ಆಪಾದನೆಯನ್ನು ನಿರಾಕರಿಸಿದ್ದಾರೆ ಹಾಗೂ ತಮ್ಮ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.