ADVERTISEMENT

ಹೆಡ್ಲಿ ಮಾತನ್ನು ನಂಬುವಂತಿಲ್ಲ: ಪಾಕ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ): `ಲಷ್ಕರ್- ಎ- ತೊಯ್ಬಾದ ಗೂಢಚಾರ ಹಾಗೂ ಮುಂಬೈ ದಾಳಿ ಪ್ರಕರಣದ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ವಿಶ್ವಾಸಾರ್ಹ ವ್ಯಕ್ತಿಯಲ್ಲ. ಆತ ಒಬ್ಬ ಅಪರಾಧಿ. ಆದ್ದರಿಂದ ಅವನ ಮಾತುಗಳನ್ನು ನಂಬುವಂತಿಲ್ಲ~ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.

ಅಮೆರಿಕದಲ್ಲಿ ಬಂಧನದಲ್ಲಿರುವ ಹೆಡ್ಲಿ, ಮುಂಬೈ ದಾಳಿಗೆ ಐಎಸ್‌ಐ ಹೊಣೆ ಎಂದು ವಿಚಾರಣೆ ವೇಳೆ ಬಹಿರಂಗಪಡಿಸಿ ಸುಮಾರು ಒಂದು ವಾರ ಕಳೆದರೂ ಯಾವುದೇ ಹೇಳಿಕೆ ನೀಡದೆ ಅಚ್ಚರಿಗೆ ಕಾರಣವಾಗಿದ್ದ ಪಾಕಿಸ್ತಾನ ಇದೇ ಮೊದಲ ಬಾರಿಗೆ ಈ ಪ್ರತಿಕ್ರಿಯೆ ನೀಡಿದೆ.

`ಹೆಡ್ಲಿ ತನ್ನ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಾದ ಸಾಕ್ಷ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ~ ಎಂದು `ನ್ಯೂಸ್ ವೀಕ್~ ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಮುಂಬೈನಲ್ಲಿ ದಾಳಿ ನಡೆಯುವ ಮುನ್ನ ಸ್ಥಳ ಗುರುತಿಸಲು ತನಗೆ ಐಎಸ್‌ಐನ ಮೇಜರ್ ನಿರ್ದೇಶನ ನೀಡಿದ್ದರು ಎಂಬ  ಹೆಡ್ಲಿ ಹೇಳಿಕೆ ಕುರಿತು ಸುದ್ದಿಗಾರರು ಗಮನಸೆಳೆದಾಗ,  `ಈ ಹೇಳಿಕೆ ಬಗ್ಗೆ ಹೆಡ್ಲಿ ಬಳಿ ಸೂಕ್ತ ದಾಖಲೆಗಳಿವೆಯೇ~ ಎಂದು ಮರು ಪ್ರಶ್ನಿಸಿದರು.

`ಮುಂಬೈ ಮೇಲಿನ ದಾಳಿ ವಿಷಯದಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಭಾರತಕ್ಕೂ ಅರಿವಿದೆ. ಆದಾಗ್ಯೂ ಈ ಸಂಬಂಧ ಏಳು ಜನರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ~ ಎಂದರು.

`ಸಂಜೌತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಯಲ್ಲಿ ಐಎಸ್‌ಐ ಪಾತ್ರದ ಬಗ್ಗೆ ಪುಕಾರು ಎಬ್ಬಿಸಲಾಗಿತ್ತು. ಆದರೆ ಐಎಸ್‌ಐ ನಿರ್ದೋಷಿ ಎಂಬುದು ನಂತರ ಸಾಬೀತಾಗಲಿಲ್ಲವೇ ಎಂದ ಮಲಿಕ್, ಇದೇ ತೆರನಾಗಿ ಮುಂಬೈ ದಾಳಿಯ ಪ್ರಕರಣದಲ್ಲೂ ನ್ಯಾಯಾಲಯದ ಫಲಿತಾಂಶ ಹೊರಹೊಮ್ಮುತ್ತದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಕಿಸ್ತಾನದಲ್ಲಿನ ಬಂಧಿತರ ವಿಚಾರಣೆ ವಿಳಂಬ ಗತಿಯಲ್ಲಿ ಸಾಗುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ, `ಈ ಸಂಬಂಧ ನಾವು ಭಾರತಕ್ಕೆ ಸೂಕ್ತ ಸಾಕ್ಷ್ಯ ಒದಗಿಸುವಂತೆ ಕೇಳಿದ್ದೇವೆ. ಆದರೆ ಇನ್ನೂ ಆ ಬಗ್ಗೆ ನಮಗೆ ಸೂಕ್ತ ದಾಖಲೆ ಲಭ್ಯವಾಗಿಲ್ಲ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ನ್ಯಾಯಾಲಯದ ಆದೇಶದ ಅನುಸಾರವೇ ಬಿಡುಗಡೆ ಮಾಡಲಾಗಿದೆ~ ಎಂದು ಪ್ರತಿಕ್ರಿಯಿಸಿದರು.

`ತಾಲಿಬಾನ್ ಮತ್ತು ಉಗ್ರರ ಗುಂಪುಗಳಿಗೆ ವಿದೇಶಿ ಹಣದ ನೆರವು ದೊರೆಯುತ್ತಿರುವುದು ಕೇವಲ ಊಹೆಯಲ್ಲ. ಇದು ನಿಜ~ ಎಂದೂ ಮಲಿಕ್ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇತ್ತೀಚೆಗೆ ಭಾರತಕ್ಕೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋದಾಗ ತಾವು ಇಂತಹ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅವರ ಜೊತೆ ಮಾತನಾಡಿದ್ದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.