ADVERTISEMENT

ಹೊರಗುತ್ತಿಗೆ: ಮತ್ತೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಡೆನ್ವರ್ (ಪಿಟಿಐ): ಭಾರತದಂತಹ ದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಹೊರಗುತ್ತಿಗೆ  ವಿಚಾರದಲ್ಲಿ ವಿರೋಧ ನಿಲುವು ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಅಮೆರಿಕದಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ತೆರಿಗೆಯಲ್ಲಿ ರಿಯಾಯ್ತಿ ತೋರುವುದಾಗಿ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮಗೆ ಪ್ರತಿಸ್ಪರ್ಧಿಯಾಗಿರುವ ರಿಪಬ್ಲಿಕನ್ ಪಕ್ಷದ ಮಿಟ್ ರೋಮ್ನಿ ಅವರೊಂದಿಗೆ ಚುನಾವಣಾ ನಿಮಿತ್ತ ಏರ್ಪಡಿಸಿದ್ದ ಮುಕ್ತ ಚರ್ಚೆಯಲ್ಲಿ ಒಬಾಮ ತೀಕ್ಷ್ಣವಾಗಿ ತಮ್ಮ ನಿಲುವನ್ನು ಮಂಡಿಸಿದ್ದಾರೆ.

`ಸಾಗರೋತ್ತರ ರಾಷ್ಟ್ರಗಳಿಗೆ ಹೊರಗುತ್ತಿಗೆ ಮೂಲಕ ಉದ್ಯೋಗಾವಕಾಶ ನೀಡುವ ಕಂಪೆನಿಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಸ್ಥಗಿತ ಮಾಡಿ, ದೇಶದಲ್ಲೇ ಉದ್ದಿಮೆ ಆರಂಭಿಸಿ ಇಲ್ಲೇ ಉದ್ಯೋಗಾವಕಾಶವನ್ನು ಕಲ್ಪಿಸುವ ಕಂಪೆನಿಗಳಿಗೆ ತೆರಿಗೆಯಲ್ಲಿ ರಿಯಾಯ್ತಿ ನೀಡುವ ಚಿಂತನೆ ಇದೆ~ ಎಂದು ತಿಳಿಸಿದ್ದಾರೆ.

ಕಾರ್ಪೊರೇಟ್ ವಲಯದ ಮೇಲಿನ ತೆರಿಗೆ ಅಧಿಕವಾಗಿಯೇ ಇದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಉತ್ಪಾದನಾ ಕ್ಷೇತ್ರದ ಉದ್ದಿಮೆಗಳಿಗೆ ಶೇ 25ರಷ್ಟಾದರೂ ಕರ ಕಡಿಮೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಹೊರಗುತ್ತಿಗೆ ವಿಚಾರದಲ್ಲಿ ಈ ಹಿಂದೆ ಕೂಡ ರೋಮ್ನಿ ಅವರ ಧೋರಣೆ ವಿರುದ್ಧ ಕಿಡಿಕಾರಿದ್ದ ಒಬಾಮ, `ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಗೆ ನೀಡುತ್ತಿರುವ ಹೊರಗುತ್ತಿಗೆಯು ಅಮೆರಿಕದವರ ಉದ್ಯೋಗಾವಕಾಶವನ್ನು ಕಿತ್ತುಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದರು.

ಒಬಾಮ ಅವರ ಈ ಧೋರಣೆಯನ್ನು ರೋಮ್ನಿ ಅವರು ಖಡಾಖಂಡಿತವಾಗಿ ತಳ್ಳಿಹಾಕಿದ್ದು, `ಸಾಗರೋತ್ತರ ರಾಷ್ಟ್ರಗಳಿಗೆ ಹೊರಗುತ್ತಿಗೆ ನೀಡುವುದನ್ನು ತಪ್ಪಿಸುವುದು ಅಷ್ಟು ಸುಲಭದ ಮಾತಲ್ಲ. ಬದಲಿಗೆ ಹೊರದೇಶಗಳಿಗೆ ಹರಿಯುತ್ತಿರುವ ಅಮೆರಿಕದ ಹಣವನ್ನು ವಾಪಸು ತರುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.