ADVERTISEMENT

ಹೊಸ ಪ್ರಧಾನಿಗೂ ಬಿಡದ ವಿವಾದ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST
ಹೊಸ ಪ್ರಧಾನಿಗೂ ಬಿಡದ ವಿವಾದ
ಹೊಸ ಪ್ರಧಾನಿಗೂ ಬಿಡದ ವಿವಾದ   

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಹೊಸ ಪ್ರಧಾನಮಂತ್ರಿ ನೇಮಕವಾದರೂ ಪ್ರಧಾನಿ ಸ್ಥಾನದ ಸುತ್ತ ಎದ್ದ ವಿವಾದಗಳು ಬಗೆಹರಿಯುವಂತೆ ಕಾಣುತ್ತಿಲ್ಲ.

ಖಾಸಗಿ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ   ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಅವ್ಯವಹಾರದ ಕುರಿತು ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದ್ದು,  ಈ ಪ್ರಕರಣದಲ್ಲಿ ನೂತನ ಪ್ರಧಾನಿ ರಾಜಾ ಪರ್ವೇಜ್ ಅಶ್ರಫ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ
ಪರ್ವೇಜ್ ಅಶ್ರಫ್ ಈ ಹಿಂದೆ ಇಂಧನ ಸಚಿವರಾಗಿದ್ದಾಗ ಹಲವಾರು ವಿದ್ಯುತ್ ಯೋಜನೆಗಳಿಗೆ ಪರವಾನಗಿ ನೀಡಿದ್ದರು. ಆದ್ದರಿಂದ ಅವರನ್ನು ಸಹ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು  ಮಂಗಳವಾರ  ವರದಿ ಮಾಡಿವೆ.

ಪಾಕಿ ಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ  ರಾಷ್ಟ್ರೀಯ ಹೊಣೆಗಾರಿಕಾ ಸಂಸ್ಥೆ(ಎನ್‌ಎಬಿ) ಪ್ರಧಾನಿ ಸೇರಿದಂತೆ ಯಾರನ್ನು ಬೇಕಾದರೂ ಪ್ರಶ್ನಿಸುವ ಅಧಿಕಾರವನ್ನು ಹೊಂದಿದೆ.

`ಅವ್ಯವಹಾರದ ವಿಚಾರಣೆ ಮುಂದುವರಿದಿದೆ ಮತ್ತು ಪ್ರಧಾನಿಯನ್ನೂ ವಿಚಾರಣೆಗೆ ಒಳಪಡಿಸಬಹುದು. ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿ ಪ್ರಧಾನಿಯನ್ನು ವಿಚಾರಣೆ ಒಳಪಡಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ಎನ್‌ಐಬಿ ನಿರ್ಧರಿಸುತ್ತದೆ~ ಎಂದು ಅದರ ವಕ್ತಾರ ಜಫರ್ ಇಕ್ಬಾಲ್ ಖಾನ್ ಹೇಳಿದ್ದಾರೆ. ಇಂಧನ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಧಾನಿಗೆ ಪ್ರಶ್ನಾವಳಿಯನ್ನು ಕಳುಹಿಸಲಾಗುವುದು ಎಂದೂ ಖಾನ್ ಸ್ಪಷ್ಟಪಡಿಸಿದ್ದಾರೆ.

ಉಪ ಪ್ರಧಾನಿ ನೇಮಕ: ಆಡಳಿತಾರೂಢ ಪಿಪಿಪಿಯ ಪ್ರಮುಖ ಮಿತ್ರ ಪಕ್ಷ ಪಿಎಂಎಲ್-ಕ್ಯೂ ನಾಯಕ ಚೌಧರಿ ಪರ್ವೇಜ್ ಇಲಾಹಿ ಅವರನ್ನು ಪಾಕ್ ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಇವರ ಸೇರ್ಪಡೆಯಿಂದ ಪ್ರಧಾನಿ ಅಶ್ರಫ್ ಅವರ ಸಂಪುಟದ ಸಚಿವರ ಸಂಖ್ಯೆ 53ಕ್ಕೆ ಏರಿದಂತಾಗಿದೆ.


ಹೆಲಿಪ್ಯಾಡ್ ನಿರ್ಮಾಣಕ್ಕೆ ವಿರೋಧ

ಈ ಮಧ್ಯೆ ಅಶ್ರಫ್ ಅವರು ಪಂಜಾಬ್ ಪ್ರಾಂತ್ಯದಲ್ಲಿನ ಮನೆಯ ಹತ್ತಿರವೇ ಹೆಲಿಪ್ಯಾಡ್ ನಿರ್ಮಿಸಲು ನಿರ್ಧರಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇಸ್ಲಾಮಾಬಾದ್ ಹೊರ ವಲಯದ ಗುಜಾರ್ ಖಾನ್ ಪ್ರದೇಶದಲ್ಲಿರುವ ಅಶ್ರಫ್ ಮನೆ ಬಳಿ ಹೆಲಿಪ್ಯಾಡ್ ನಿರ್ಮಿಸಲು ರಾವಲ್ಪಿಂಡಿ ಜಿಲ್ಲಾ ಪೊಲೀಸರು ಉದ್ದೇಶಿಸಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ `ಡಾನ್~ ವರದಿ ಮಾಡಿದೆ.

ಗಣ್ಯರ ಭೇಟಿಯಿಂದಾಗುವ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ದೇಶ ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ಪ್ರಧಾನಿಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.