ADVERTISEMENT

ಕಾಬೂಲ್: ಈದ್ ಉಲ್ ಫಿತ್ರ್‌ ಪ್ರಾರ್ಥನೆ ವೇಳೆ ಸ್ಫೋಟ, 12 ಸಾವು

ಪಿಟಿಐ
Published 14 ಮೇ 2021, 11:46 IST
Last Updated 14 ಮೇ 2021, 11:46 IST
ಕಾಬೂಲ್‌ನಲ್ಲಿ ಈದ್ ಪ್ರಯುಕ್ತ ಪ್ರಾರ್ಥನೆ: ಎಎಫ್‌ಪಿ ಚಿತ್ರ
ಕಾಬೂಲ್‌ನಲ್ಲಿ ಈದ್ ಪ್ರಯುಕ್ತ ಪ್ರಾರ್ಥನೆ: ಎಎಫ್‌ಪಿ ಚಿತ್ರ   

ಕಾಬೂಲ್:ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಈದ್ ಉಲ್ ಫಿತ್ರ್‌ ಆಚರಣೆ ಹಿನ್ನೆಲೆ ನಡೆಯುತ್ತಿದ್ದ ಪ್ರಾರ್ಥನೆ ಸಂದರ್ಭ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

'ಮಸೀದಿಯ ಇಮಾಮ್ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ’ ಎಂದು ಕಾಬೂಲ್ ಪೊಲೀಸ್ ವಕ್ತಾರ ಫರ್ಡಾವ್ಸ್ ಫ್ರಮುರ್ಜ್ ಹೇಳಿದ್ದಾರೆ.

ಕಾಬೂಲ್ ಪ್ರಾಂತ್ಯದ ಶಕರ್ ದಾರಾ ಜಿಲ್ಲೆಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು.

ADVERTISEMENT

ಗುರುವಾರ ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವೆ ತಾತ್ಕಾಲಿಕ ಒಪ್ಪಂದ ಜಾರಿಗೆ ಬಂದ ನಂತರವೂ ಈ ಸ್ಫೋಟ ನಡೆದಿರುವುದು ಆತಂಕಕ್ಕೆ ಎಡೆ ಮಡಿದೆ.

ಈದ್ ಆಚರಣೆ ಹಿನ್ನೆಲೆಯಲ್ಲಿ ಯುದ್ಧದ ವಾತಾವರಣವನ್ನು ಬದಿಗೊತ್ತಿ ಶಾಂತಿ ಒಪ್ಪಂದಕ್ಕೆ ಬರಲಾಗಿತ್ತು. ಎರಡು ದಶಕಗಳ ತಾಲಿಬಾನ್ ಮತ್ತು ಸರ್ಕಾರದ ನಡುವಿನ ಸಂಘರ್ಷದಲ್ಲಿ ಇದು ನಾಲ್ಕನೆಯ ಒಪ್ಪಂದವಾಗಿತ್ತು.

ಮೇ 1 ರಂದು ಅಮೆರಿಕದ ಮಿಲಿಟರಿ ತನ್ನ 2,500 ಸೈನಿಕರನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಮಾರಣಾಂತಿಕ ಹಿಂಸಾಚಾರ ನಡೆಯುತ್ತಿರುವುದು ದೇಶವನ್ನು ಬೆಚ್ಚಿ ಬೀಳಿಸಿದೆ.

ಕಳೆದ ವಾರ, ರಾಜಧಾನಿಯ ಬಾಲಕಿಯರ ಶಾಲೆಯ ಹೊರಗೆ ನಡೆದ ಸರಣಿ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು, ಅವರಲ್ಲಿ ಹೆಚ್ಚಿನವರು ಹದಿಹರೆಯದ ವಿದ್ಯಾರ್ಥಿನಿಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.