ADVERTISEMENT

180 ಭಾರತೀಯರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಭಾರತದೊಂದಿಗೆ ಸ್ನೇಹ- ಸಂಬಂಧ ಬಲಗೊಳಿಸಿಕೊಳ್ಳುವ ಉದ್ದೇಶದಿಂದ ಪಾಕಿಸ್ತಾನ ಸರ್ಕಾರ ವಿವಿಧ ಜೈಲುಗಳಲ್ಲಿರುವ 180 ಭಾರತೀಯ ಕೈದಿಗಳನ್ನು ಶನಿವಾರ ಬಿಡುಗಡೆ ಮಾಡಿದೆ.

ಹೊಸ ವರ್ಷದ ಸಂದರ್ಭದಲ್ಲಿ ಸದುದ್ದೇಶ ಮತ್ತು ಸ್ನೇಹ- ಸೌಜನ್ಯ ಸೂಚಕವಾಗಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದಿರುವ ಅಧಿಕಾರಿಗಳು, ಬಿಡುಗಡೆಗೊಂಡವರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಭಾನುವಾರ ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಬಂಧಿತರಲ್ಲಿ 179 ಮೀನುಗಾರರು ಮತ್ತು ಆರು ನಾಗರಿಕರು ಇದ್ದಾರೆ. ಜಲ ಗಡಿ ಉಲ್ಲಂಘಿಸಿದ್ದಕ್ಕಾಗಿ ಮೀನುಗಾರರನ್ನು ಬಂಧಿಸಲಾಗಿತ್ತು ಎಂದು ಪಾಕ್‌ನಲ್ಲಿರುವ ಭಾರತದ ಹೈಕಮಿಷನರ್ ಕಚೇರಿ ಹೇಳಿದೆ.
ಭಾರತೀಯ ಕೈದಿಗಳ ಬಿಡುಗಡೆಗೆ ಅಗತ್ಯ ದಾಖಲೆ ಮತ್ತು ಪತ್ರಗಳನ್ನು ಕರಾಚಿ ಮತ್ತು ಲಾಹೋರ್‌ಗಳಲ್ಲಿರುವ ಜೈಲು ಅಧಿಕಾರಿಗಳಿಗೆ ಭಾರತದ ಹೈಕಮಿಷನರ್ ಕಚೇರಿ ರವಾನಿಸಿದೆ.

ಕರಾಚಿಯ ಲಂಧಿ ಜೈಲಿನಲ್ಲಿ ಇರಿಸಲಾಗಿದ್ದ 179 ಮೀನುಗಾರರು ಮತ್ತು ಒಬ್ಬ ನಾಗರಿಕನನ್ನು ಬಿಡುಗಡೆ ಮಾಡಿ ಎಲ್ಲರನ್ನೂ ನಾಲ್ಕು ಬಸ್‌ಗಳಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಲಾಹೋರ್‌ಗೆ ಕರೆದುಕೊಂಡು ಹೋಗಲಾಗುತ್ತಿದೆ. ವಾಘಾ ಗಡಿಯವರೆಗೂ ಅವರನ್ನು ಕರೆದೊಯ್ದು ಭಾನುವಾರ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ.

ಪಾಕಿಸ್ತಾನದಲ್ಲಿ ಇನ್ನೂ 250 ಭಾರತೀಯ ಮೀನುಗಾರರು ವಿವಿಧ ಜೈಲುಗಳಲ್ಲಿ ಕೈದಿಗಳಾಗಿದ್ದಾರೆ.

ಸೆರೆವಾಸದ ಅವಧಿ ಪೂರೈಸಿರುವ ಕೈದಿಗಳನ್ನು ಬಿಡುಗಡೆ ಮಾಡಲು ಉಭಯ ರಾಷ್ಟ್ರಗಳು ಇತ್ತೀಚಿನ ದಿನಗಳಲ್ಲಿ ತ್ವರಿತ ಕ್ರಮ ಕೈಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.