ADVERTISEMENT

ಬಲವಂತದ ದುಡಿಮೆಯ ಸರಕಿಗೆ ಅಮೆರಿಕ ನಿಷೇಧ

ಏಜೆನ್ಸೀಸ್
Published 2 ಅಕ್ಟೋಬರ್ 2019, 19:12 IST
Last Updated 2 ಅಕ್ಟೋಬರ್ 2019, 19:12 IST

ವಾಷಿಂಗ್ಟನ್‌: ಬಲವಂತದ ದುಡಿಮೆಯಿಂದ ತಯಾರಿಸಲಾದ ಸರಕುಗಳ ಆಮದನ್ನು ನಿಷೇಧಿಸುವುದಾಗಿ ಅಮೆರಿಕ ಮಂಗಳವಾರ ಘೋಷಿಸಿದೆ.

ಬ್ರೆಜಿಲ್‌, ಚೀನಾ ಮತ್ತು ಮಲೇಷ್ಯಾ ಮೂಲದ ಕಂಪನಿಗಳು ಉತ್ಪಾದಿಸುವ ಬಟ್ಟೆ, ಚಿನ್ನ, ವಜ್ರ ಮತ್ತು ಇತರೆ ಉತ್ಪನ್ನ, ಪೂರ್ವ ಕಾಂಗೊದ ಚಿನ್ನದ ಗಣಿ ಹಾಗೂ ಜಿಂಬಾಬ್ವೆ ಪ್ರದೇಶ‌ದ ಕಂಪನಿಗಳ ವಜ್ರಗಳ ಆಮದನ್ನು ಟ್ರಂಪ್‌ ಸರ್ಕಾರ ನಿಷೇಧಿಸಿದೆ.

‘ತಾವು ಬಲವಂತದ ದುಡಿಮೆ ಮಾಡಿಸುತ್ತಿಲ್ಲ ಎಂದು ಖಚಿತಪಡಿಸುವ ದೇಶಗಳು ನಿಷೇಧಿಸಲಾಗಿರುವ ಸರಕುಗಳನ್ನು ಪುನಃ ರಫ್ತು ಮಾಡಬಹುದಾಗಿದೆ’ ಎಂದು ಕಸ್ಟಮ್ಸ್‌ ಮತ್ತು ಗಡಿ ರಕ್ಷಣೆ ಅಧಿಕಾರಿ ಬ್ರೆಂಡಾ ಸ್ಮಿತ್‌ ಹೇಳಿದ್ದಾರೆ.

ADVERTISEMENT

ಅಮೆರಿಕದ ಈ ನಿರ್ಧಾರ ನಿರ್ಲಜ್ಜ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ಜಿಂಬಾಬ್ವೆ ಸರ್ಕಾರ ಹೇಳಿದೆ.

ಮಕ್ಕಳಿಗೆ ಪೌರತ್ವ ವರ್ಗಾವಣೆ: ಹೊಸ ನೀತಿ

ದುಬೈ(ರಾಯಿಟರ್ಸ್‌): ಇರಾನ್‌ನ ಮಹಿಳೆಯರು ತಮ್ಮ ಮಕ್ಕಳಿಗೆ ಅವರ ಪೌರತ್ವ ವರ್ಗಾವಣೆ ಮಾಡಬಹುದು ಎನ್ನುವ ಹೊಸ ಕಾನೂನಿಗೆ ಇರಾನ್‌ನ ಅತ್ಯುನ್ನತ ಸಾಂವಿಧಾನಿಕ ಮಂಡಳಿಯೊಂದು ಒಪ್ಪಿಗೆ ನೀಡಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸಾವಿರಾರು ಮಕ್ಕಳು ಹೊಸ ಕಾನೂನಿನಿಂದಾಗಿ ಇರಾನ್‌ನ ಪೌರತ್ವ ಪಡೆಯಲು ಸಾಧ್ಯವಾಗಲಿದೆ. ವಿದೇಶಿಗರನ್ನು ಮದುವೆಯಾದ ಇರಾನ್‌ ಮಹಿಳೆಯರು ತಮ್ಮ ಪೌರತ್ವವನ್ನು ಮಕ್ಕಳಿಗೆ ವರ್ಗಾಯಿಸಲುಇಲ್ಲಿಯವರೆಗೂ ಅವಕಾಶವಿರಲಿಲ್ಲ. ಈ ಕಾನೂನಿನ ಪ್ರಸ್ತಾವವನ್ನು ಮಂಡಳಿ ಭದ್ರತಾ ದೃಷ್ಟಿಯಿಂದಹಿಂದೊಮ್ಮೆ ತಿರಸ್ಕರಿಸಿತ್ತು. ಇರಾನ್‌ನಲ್ಲಿ ಅಫ್ಗಾನಿಸ್ತಾನದಿಂದ ವಲಸೆ ಬಂದ 30 ಲಕ್ಷ ಜನರಿದ್ದು, ಹೆಚ್ಚಿನವರು ಇರಾನ್‌ನ ಮಹಿಳೆಯರನ್ನು ಮದುವೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.