ADVERTISEMENT

2012: ವಿಮಾನಯಾನದ ಅತ್ಯಂತ ಸುರಕ್ಷಿತ ವರ್ಷ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಮಾಸ್ಕೊ (ಐಎಎನ್‌ಎಸ್): ಪ್ರಸಕ್ತ ವರ್ಷದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ವಿಮಾನಗಳು ಅಪಘಾತಕ್ಕೆ ಈಡಾಗಿದ್ದು, 2012 ನಾಗರಿಕ ವಿಮಾನಯಾನ ಕ್ಷೇತ್ರದಲ್ಲೇ ಅತ್ಯಂತ ಸುರಕ್ಷಿತ ವರ್ಷ ಎನ್ನಲಾಗಿದೆ.

ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಘ (ಐಎಟಿಎ) ಈ ಮಾಹಿತಿ ನೀಡಿದೆ. ಜಗತ್ತಿನಾದ್ಯಂತ 240 ವಿಮಾನ ಸಂಸ್ಥೆಗಳು ಈ ಸಂಘದ ಸದಸ್ಯತ್ವ ಹೊಂದಿವೆ. ತನ್ನ ಸಂಘದ ಸದಸ್ಯರು ಒಂದೇ ಒಂದು ವಿಮಾನ ಅಪಘಾತವಾಗಿರುವ ಮಾಹಿತಿ ನೀಡಿಲ್ಲ ಎಂದು `ಐಎಟಿಎ' ಹೇಳಿದ್ದಾಗಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ವಿಮಾನ ಅಪಘಾತದ ಸಾಧ್ಯತೆ ಕುರಿತು ಮಾಹಿತಿ ನೀಡಿರುವ ಸಂಸ್ಥೆ, 4.7 ಲಕ್ಷ ಸಲ ವಿಮಾನ ಹಾರಾಟ ನಡೆದಾಗ ಒಂದು ಸಲ ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ಪತ್ರಿಕೆಯಲ್ಲಿ ವಿವರಿಸಲಾಗಿದೆ.

ಈ ಸಂಸ್ಥೆಯ ಸದಸ್ಯರಲ್ಲದ ಎರಡು ಏರ್‌ಲೈನ್ಸ್‌ಗಳಿಗೆ ಸೇರಿದ ವಿಮಾನಗಳು 2012ರಲ್ಲಿ ಅಪಘಾತಕ್ಕೀಡಾಗಿದ್ದವು. ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ಭೋಜ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಅಪಘಾತಕ್ಕೀಡಾಗಿ 127 ಮಂದಿ ಸಾವನ್ನಪ್ಪಿದ್ದರು. ಜೂನ್ ತಿಂಗಳಲ್ಲಿ ನೈಜಿರಿಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ 150 ಮಂದಿ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.