ADVERTISEMENT

2018ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆ ಇಲ್ಲ

ಪಿಟಿಐ
Published 4 ಮೇ 2018, 11:51 IST
Last Updated 4 ಮೇ 2018, 11:51 IST
2018ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆ ಇಲ್ಲ
2018ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆ ಇಲ್ಲ   

ಸ್ಟಾಕ್‌ಹೋಮ್‌ (ಎಎಫ್‌ಪಿ): ಲೈಂಗಿಕ ದೌರ್ಜನ್ಯ ಹಗರಣದ ಆರೋಪ ಎದುರಿಸುತ್ತಿರುವ ಸ್ವೀಡನ್ನಿನ ಹಿರಿಯ ಸಾಹಿತಿ ಜೀನ್ ಕ್ಲಾಡ್ ಅರ್ನಾಲ್ಟ್‌ ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿ ಜತೆಗೆ ನಿಕಟ ಸಂಬಂಧ ಹೊಂದಿರುವ ವಿಷಯ ಗಂಭೀರ ಸ್ವರೂಪ ಪಡೆದಿದ್ದು, ಮುಜುಗರಕ್ಕೆ ಒಳಗಾಗಿರುವ ಸ್ವೀಡಿಷ್ ಅಕಾಡೆಮಿ ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಿಸುವುದಿಲ್ಲ ಎಂದು ತಿಳಿಸಿದೆ.

ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಸಲ ಈ ವರ್ಷದ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಘೋಷಿಸುತ್ತಿಲ್ಲ. ಆದರೆ ಇತರ ವಿಷಯಗಳಿಗೆ ಈ ಮೊದಲಿನಂತೆಯೇ ಪ್ರಶಸ್ತಿ ಘೋಷಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

‘ಮುಂದಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರನ್ನು ಘೋಷಿಸುವ ಮೊದಲು ಸಾರ್ವಜನಿಕರ ವಿಶ್ವಾಸವನ್ನು ಮರಳಿ ಪಡೆದುಕೊಳ್ಳಲು ಸಮಯಾವಕಾಶ ಬೇಕು’ ಎಂದು ಸ್ವೀಡಿಷ್ ಅಕಾಡೆಮಿಯ ಹಂಗಾಮಿ ಶಾಶ್ವತ ಕಾರ್ಯದರ್ಶಿ ಆ್ಯಂಡರ್ಸ್ ಆಲ್ಸನ್‌ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ADVERTISEMENT

2018 ಮತ್ತು 2019ನೇ ಸಾಲಿನ ಪ್ರಶಸ್ತಿಗಳನ್ನು ಒಂದೇ ಬಾರಿ ಘೋಷಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸ್ವೀಡನ್‌ನ ಹಿರಿಯ ಸಾಹಿತಿ ಜೀನ್ ಕ್ಲಾಡ್ ಅರ್ನಾಲ್ಟ್‌, ನಮ್ಮ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು 18 ಮಹಿಳೆಯರು ಕಳೆದ ನವೆಂಬರ್‌ನಲ್ಲಿ ‘ಮಿ ಟೂ’ ಹ್ಯಾಷ್‌ಟ್ಯಾಗ್‌’ ಆಂದೋಲನದಲ್ಲಿ ತಿಳಿಸಿದ್ದರು. ಇದರ ನಂತರ, ಅರ್ನಾಲ್ಟ್‌ ಮತ್ತು ಅಕಾಡೆಮಿ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು.

ಅರ್ನಾಲ್ಟ್‌ ಅವರು ಸ್ವೀಡಿಷ್‌ ಅಕಾಡೆಮಿ ಸದಸ್ಯೆ ಕ್ಯಾಥರೀನಾ ಫ್ರಾಸ್ಟೆನ್ಸನ್‌ ಅವರ ಪತಿ. ಈ ಹಗರಣ ತೀವ್ರ ಸ್ವರೂಪ ಪಡೆದಿದ್ದರಿಂದ ಫ್ರಾಸ್ಟೆನ್ಸನ್‌, ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಇದೇ ಹಗರಣದ ಕಾರಣಕ್ಕೆ ಏಪ್ರಿಲ್‌ 12ರಂದು ಅಕಾಡೆಮಿಯ ಶಾಶ್ವತ ಕಾರ್ಯದರ್ಶಿ ಸಾರಾ ಡೇನಿಯಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಈ ಆರೋಪಗಳನ್ನು ಅರ್ನಾಲ್ಟ್‌ ಅವರು ಅಲ್ಲಗಳೆದಿದ್ದಾರೆ.

ವಿವಿಧ ವಿಷಯಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುವ ಅಕಾಡೆಮಿ, ಜಾಗತಿಕ ಯುದ್ಧ ಮತ್ತು ಇತರ ಕಾರಣಗಳಿಗಾಗಿ ಒಟ್ಟು ಏಳು ಸಲ (1915, 1919, 1925, 1926, 1927, 1936 ಮತ್ತು 1949) ಪ್ರಶಸ್ತಿ ಘೋಷಣೆ ತಡೆಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.