ADVERTISEMENT

400ಕ್ಕೂ ಅಧಿಕ ಜನ ಜಲಸಮಾಧಿ?

ಚೀನಾ: ಚಂಡಮಾರುತಕ್ಕೆ ಸಿಲುಕಿ ಮುಳುಗಿದ ಹಡಗು, 20 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 20:35 IST
Last Updated 2 ಜೂನ್ 2015, 20:35 IST

ಬೀಜಿಂಗ್‌ (ಪಿಟಿಐ/ ಐಎಎನ್‌ಎಸ್‌):  ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಚೀನಾದ ಹಡಗು ಚಂಡಮಾರುತದ ಹೊಡೆತಕ್ಕೆ ಸಿಲುಕಿ  ಯಾಂಗ್‌ಜೆ ನದಿಯಲ್ಲಿ ಮುಳುಗಿದ್ದು, 400 ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರುವುದಾಗಿ ಶಂಕಿಸಲಾಗಿದೆ.

ದಕ್ಷಿಣ ಹುಬೇ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ 9.28ರ ಸುಮಾರಿಗೆ ಹಡಗು ಮುಳುಗಿದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ತಿಳಿಸಿದೆ.ನಾಲ್ಕು ಮಹಡಿಗಳನ್ನು ಹೊಂದಿರುವ ‘ಈಸ್ಟರ್ನ್‌ ಸ್ಟಾರ್‌’ ಹಡಗು ನಾನ್ಜಿಂಗ್‌ನಿಂದ ಚಾಂಗ್‌ಕ್ವಿಂಗ್‌ಗೆ ಪ್ರಯಾಣಿಸುತ್ತಿತ್ತು.

47 ಸಿಬ್ಬಂದಿ ಸೇರಿದಂತೆ ಒಟ್ಟು 458 ಮಂದಿ ಹಡಗಿನಲ್ಲಿದ್ದರು. ಕ್ಯಾಪ್ಟನ್‌ ಮತ್ತು ಮುಖ್ಯ ಎಂಜಿನಿಯರ್‌ ಒಳಗೊಂಡಂತೆ 20 ಮಂದಿಯನ್ನು ರಕ್ಷಿಸಲಾಗಿದೆ. ಐವರು ಸಾವಿಗೀಡಾಗಿರುವುದು ಖಚಿತವಾಗಿದೆ.

‘ಹಡಗಿನಲ್ಲಿದ್ದ ಏಳು ಮಂದಿ ಈಜಿ ದಡ ಸೇರಿ ದುರಂತದ ಸುದ್ದಿಯನ್ನು ಇತರರಿಗೆ ತಲುಪಿಸಿದ್ದಾರೆ’ ಎಂದು ‘ಪೀಪಲ್ಸ್‌ ಡೈಲಿ’ ವರದಿ ಮಾಡಿದೆ.

ದುರಂತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಚಂಡಮಾರುತಕ್ಕೆ ಸಿಲುಕಿ ಹಡಗು ಮುಳುಗಿದೆ ಎಂದು ಕ್ಯಾಪ್ಟನ್‌ ತಿಳಿಸಿದ್ದಾರೆ. ‘ಗಾಳಿಯ ರಭಸಕ್ಕೆ ವಾಲತೊಡಗಿದ ಹಡಗು ಒಂದೆರಡು  ನಿಮಿಷಗಳಲ್ಲಿ ತಲೆಕೆಳಗಾಯಿತು’ ಎಂಬುದು ಕ್ಯಾಪ್ಟನ್‌ ನೀಡಿರುವ ಹೇಳಿಕೆ.

‘ಹಡಗು ಎಷ್ಟೊಂದು ವೇಗದಲ್ಲಿ ಮುಳುಗಿತೆಂದರೆ, ಕ್ಯಾಪ್ಟನ್‌ಗೆ ಎಚ್ಚರಿಕೆಯ ಸಂದೇಶವನ್ನು ನೀಡಲು ಕೂಡಾ ಸಮಯ ಇರಲಿಲ್ಲ’ ಎಂದು ಯುಯಾಂಗ್‌ ರಕ್ಷಣಾ ಕೇಂದ್ರದ ಅಧಿಕಾರಿ ವಾಂಗ್‌ ಯಾಂಗ್‌ಶೆಂಗ್‌ ತಿಳಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ. ಮಾತ್ರವಲ್ಲ, ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಕರ್ತರಿಗೆ ಸಲಹೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪ್ರತಿಕೂಲ ಹವಾಮಾನದ ನಡುವೆಯೂ ರಕ್ಷಣಾ ಕಾರ್ಯಾಚರಣೆ  ಮುಂದುವರಿದಿದೆ. 36 ನೌಕೆಗಳು ಮತ್ತು 117 ಬೋಟ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. 1,840 ಸೈನಿಕರು, 1,600 ಪೊಲೀಸರು ಮತ್ತು 1,000 ನಾಗರಿಕರು ಶೋಧ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.

ಹಡಗು ಸಂಪೂರ್ಣ ತಲೆಕೆಳಗಾಗಿದೆಯಾದರೂ, ನೀರು ನುಗ್ಗದ ಕೆಲವು ಭಾಗಗಳಲ್ಲಿ ಜನರು ಜೀವಂತವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ.

ಹಡಗಿನಲ್ಲಿದ್ದ ಹೆಚ್ಚಿನವರು 60–70 ವರ್ಷ ವಯಸ್ಸಿನವರಾಗಿದ್ದಾರೆ. ಮುಳುಗು ತಜ್ಞರು ಸೋಮವಾರ ಮಧ್ಯರಾತ್ರಿ 65 ವರ್ಷ ವಯಸ್ಸಿನ ಮಹಿಳೆ ಹಾಗೂ ಮಂಗಳವಾರ ಮಧ್ಯಾಹ್ನ 80 ವರ್ಷದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.

ಶಾಂಘೈ ಮತ್ತು ಜಿಯಾಂಗ್‌ಕ್ಸು ಪ್ರಾಂತ್ಯಕ್ಕೆ ಸೇರಿದವರು ಹಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರಯಾಣಿಕರು ಅಲ್ಲದೆ 100 ಕ್ಕೂ ಅಧಿಕ ಪ್ರವಾಸಿಗರು ಇದ್ದರು. ಶಾಂಘೈನ ಕ್ಸೀಹಿ ಟ್ರಾವೆಲ್‌ ಏಜೆನ್ಸಿ ಪ್ರವಾಸ ಏರ್ಪಡಿಸಿತ್ತು.

ಈಸ್ಟರ್ನ್‌ ಸ್ಟಾರ್‌ ಹಡಗು ಚಾಂಗ್‌ಕ್ವಿಂಗ್‌ ಈಸ್ಟರ್ನ್‌ ಶಿಪ್ಪಿಂಗ್‌ ಕಾರ್ಪೊರೇಷನ್‌ಗೆ ಸೇರಿದ್ದಾಗಿದೆ. ಈ ಕಂಪೆನಿ 1967 ರಿಂದಲೂ ಯಾಂಗ್‌ಜೆ ನದಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು.  534 ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಹಡಗಿಗೆ ಇತ್ತು.  ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಮಂದಿ ಇರಲಿಲ್ಲ ಮತ್ತು ಸಾಕಷ್ಟು ಜೀವರಕ್ಷಕ ಕವಚಗಳು ಇದ್ದವು ಎಂಬುದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.

ಮೋದಿ ದಿಗ್ಭ್ರಮೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ‘ಚೀನಾದ ಪ್ರಯಾಣಿಕ ಹಡಗು ಮುಳುಗಿರುವ ಸುದ್ದಿ ತಿಳಿದು ಆಘಾತವಾಗಿದೆ. ಹಡಗಿನಲ್ಲಿದ್ದವರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮೋದಿ ‘ಟ್ವೀಟ್‌’ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.