ADVERTISEMENT

ಹಫೀಜ್ ಹಣಿಯಲು ಪಾಕ್ ‘ರಹಸ್ಯ’ ಕಾರ್ಯಾಚರಣೆ

ರಾಯಿಟರ್ಸ್
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಹಫೀಜ್ ಸಯೀದ್‌
ಹಫೀಜ್ ಸಯೀದ್‌   

ಇಸ್ಲಾಮಾಬಾದ್‌: ಲಷ್ಕರ್ –ಎ–ತಯಬಾ ಉಗ್ರ ಸಂಘಟನೆ ಸ್ಥಾಪಕ ಹಫೀಜ್ ಸಯೀದ್‌ಗೆ ಸೇರಿದ ದತ್ತಿ ಸಂಸ್ಥೆಗಳು ಹಾಗೂ ಆಸ್ತಿ ಸ್ವಾಧೀನ
ಪಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರ ‘ರಹಸ್ಯ ಯೋಜನೆ’ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ಸರ್ಕಾರವು ಪ್ರಾಂತೀಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಈ ಸಂಬಂಧ ಡಿಸೆಂಬರ್ 19ರಂದು ರಹಸ್ಯ ಆದೇಶ ರವಾನಿಸಿದೆ. ಆಸ್ತಿ ಮುಟ್ಟುಗೋಲು ಕುರಿತು ನಡೆದ ಉನ್ನತ ಮಟ್ಟದ ಸಭೆಗಳಲ್ಲಿ ಮೂವರು ಅಧಿಕಾರಿಗಳು ಭಾಗಿಯಾಗಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ಸಯೀದ್‌ ನಡೆಸುತ್ತಿರುವ ಎರಡು ದತ್ತಿ ಸಂಸ್ಥೆಗಳಾದ ‘ಜಮಾತ್ ಉದ್ ದವಾ’ (ಜೆಯುಡಿ) ಹಾಗೂ ‘ಫಲಾಹ್‌–ಎ–ಇನ್ಸಾನಿಯತ್‌’ಗಳನ್ನು (ಎಫ್‌ಐಎಫ್) ಸ್ವಾಧೀನಪಡಿಸಿಕೊಳ್ಳುವ ಕಾರ್ಯಯೋಜನೆಯನ್ನು ಡಿಸೆಂಬರ್ 28ರೊಳಗೆ ಸಲ್ಲಿಸುವಂತೆ ಐದು ಪ್ರಾಂತೀಯ ಸರ್ಕಾರಗಳು ಹಾಗೂ ಕಾನೂನು ಜಾರಿ ನಿರ್ದೇಶನಾಲಯಗಳಿಗೆ ಪಾಕ್ ಹಣಕಾಸು ಸಚಿವಾಲಯ ನಿರ್ದೇಶನ ನೀಡಿತ್ತು ಎಂಬ ಅಂಶ ‘ರಹಸ್ಯ ದಾಖಲೆ’ಯಲ್ಲಿದೆ.

ADVERTISEMENT

ಭಯೋತ್ಪಾದನೆಗೆ ಹಣಕಾಸು ನೆರವು ತಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಅದು ನಿಗಾ ಪಟ್ಟಿಯಲ್ಲಿದೆ ಎಂದು ‘ಹಣಕಾಸು ಕಾರ್ಯಪಡೆ’ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು.

‘ಅಮೆರಿಕದ ಒತ್ತಡದಿಂದ ಈ ಕ್ರಮಕ್ಕೆ ನಾವು ಮುಂದಾಗಿಲ್ಲ. ಯಾರನ್ನೂ ನಾವು ಸಂತುಷ್ಟಗೊಳಿಸುತ್ತಿಲ್ಲ. ಜವಾಬ್ದಾರಿಯುತ ದೇಶವಾಗಿ, ಜನರ ಆಶೋತ್ತರ ಈಡೇರಿಕೆಗಾಗಿ ಪಾಕಿಸ್ತಾನ ಕೆಲಸ ಮಾಡುತ್ತಿದೆ’ ಎಂದು ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದರು.

ಪಾಕಿಸ್ತಾನದ ಮಹತ್ವದ ನಡೆ
300ಕ್ಕೂ ಹೆಚ್ಚು ಶಾಲಾ–ಕಾಲೇಜುಗಳು, ಆಸ್ಪತ್ರೆ, ಆಂಬುಲೆನ್ಸ್ ಸೇವೆ, ಮುದ್ರಣ ಘಟಕ ಒಳಗೊಂಡಂತೆ ಹಫೀಜ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಕಿಸ್ತಾನ ಇಟ್ಟಿರುವ ದೊಡ್ಡ ಹೆಜ್ಜೆ ಇದು ಎನ್ನಲಾಗಿದೆ. ಜೆಯುಡಿ ಹಾಗೂ ಎಫ್‌ಐಎಫ್ ಸಂಘಟನೆಗಳಲ್ಲಿ ಸುಮಾರು 50 ಸಾವಿರ ಮಂದಿ ಸ್ವಯಂಸೇವಕರು, ನೂರಾರು ನೌಕರರು ತೊಡಗಿಸಿಕೊಂಡಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ಸಂಘಟನೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರದ ಈ ನಡೆಗೆ ಪಾಕಿಸ್ತಾನ ಸೇನೆಯಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಸೇನೆಯು ಸಯೀದ್‌ನನ್ನು ರಾಜಕೀಯದ ಮುಖ್ಯವಾಹಿನಿಗೆ ತರುವ ಆಲೋಚನೆ ಹೊಂದಿದೆ. ಈ ಬಗ್ಗೆ ಸೇನೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆಗಸ್ಟ್ ತಿಂಗಳಿನಲ್ಲಿ ಜೆಯುಡಿಯು ‘ಮಿಲ್ಲಿ ಮುಸ್ಲಿಂ ಲೀಗ್’ ಎಂಬ ಪಕ್ಷವನ್ನು ಹುಟ್ಟುಹಾಕಿದೆ.

ಪಾಕಿಸ್ತಾನದಲ್ಲಿ ಶಸ್ತ್ರಸಜ್ಜಿತ ಸೇನೆಯನ್ನು ಜೆಯುಡಿ ವಿರೋಧಿಸುತ್ತಿದೆ. ಆದರೆ ಭಾರತದ ಆಡಳಿತವಿರುವ ಕಾಶ್ಮೀರದಲ್ಲಿ ಬಂಡಾಯಗಾರರ ಪರವಾಗಿ ಹೋರಾಡಲು ಸೇನೆಗೆ ಬೆಂಬಲ ನೀಡುತ್ತಿದೆ.

ದೇಣಿಗೆ ಸಂಗ್ರಹಕ್ಕೆ ನಿಷೇಧ
ಇಸ್ಲಾಮಾಬಾದ್‌ (ಪಿಟಿಐ):
ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್ ದವಾ ಮತ್ತು ಫಲ್ಹಾ-ಐ-ಇನ್ಸಾನಿಯತ್ ಫೌಂಡೇಶನ್ ದೇಣಿಗೆಗಳನ್ನು ಸಂಗ್ರಹಿಸುವುದನ್ನು ಪಾಕಿಸ್ತಾನದ ಆರ್ಥಿಕ ನಿಯಂತ್ರಣ ಮಂಡಳಿ  ನಿಷೇಧಿಸಿದೆ.

ಈ ಸಂಘಟನೆಗಳು ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧ ಹೇರಿರುವ ಯಾವುದೇ ಸಂಘಟನೆಗಳು ದೇಣಿಗೆ ಸಂಗ್ರಹ ಮಾಡುವಂತಿಲ್ಲ ಎಂದು ಪಾಕಿಸ್ತಾನದ ಭದ್ರತಾ ಮತ್ತು ವಿನಿಮಯ ಆಯೋಗ (ಎಸ್‌ಇಸಿಪಿ) ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.