ADVERTISEMENT

ಅಮೆರಿಕ: ಗ್ರೀನ್ ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಖುಷಿ ಸುದ್ದಿ

ಪಿಟಿಐ
Published 11 ಜನವರಿ 2018, 19:36 IST
Last Updated 11 ಜನವರಿ 2018, 19:36 IST
ಅಮೆರಿಕ: ಗ್ರೀನ್ ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಖುಷಿ ಸುದ್ದಿ
ಅಮೆರಿಕ: ಗ್ರೀನ್ ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಖುಷಿ ಸುದ್ದಿ   

ವಾಷಿಂಗ್ಟನ್ : ಅರ್ಹತೆ ಆಧರಿಸಿ ವಲಸೆ ಸೌಲಭ್ಯ ನೀಡುವುದು ಮತ್ತು ಗ್ರೀನ್ ಕಾರ್ಡ್ ವಿತರಣೆ ಪ್ರಮಾಣವನ್ನು ವಾರ್ಷಿಕ ಶೇ 45ಕ್ಕೆ ಏರಿಸುವ ಮಸೂದೆಯೊಂದು ಅಮೆರಿಕ ಸಂಸತ್ತಿನಲ್ಲಿ ಮಂಡನೆಯಾಗಿದೆ. ‘ಅಮೆರಿಕದ ಭವಿಷ್ಯವನ್ನು ಭದ್ರಗೊಳಿಸುವ ಕಾಯ್ದೆ’ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂಕಿತ ಬಿದ್ದರೆ, ಅದರ ದೊಡ್ಡ ಪ್ರಮಾಣದ ಫಲಾನುಭವಿಗಳು ಭಾರತದ ಟೆಕಿಗಳಾಗಿರಲಿದ್ದಾರೆ.

ಸದ್ಯ ಪ್ರತಿ ವರ್ಷ 1.2 ಲಕ್ಷ ಗ್ರೀನ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಹೊಸ ಕಾನೂನಿನ ಪ್ರಕಾರ ಇದು 1.75 ಲಕ್ಷಕ್ಕೆ ಏರಲಿದೆ. ಅಲ್ಲದೆ, ಕಡ್ಡಾಯವಾಗಿ ವಿವಿಧ ದೇಶಗಳ ಜನರಿಗೆ ವೀಸಾ ಕೊಡುವ ಯೋಜನೆ ಅಂತ್ಯವಾಗಲಿದೆ. ಅಂದರೆ, ಸದ್ಯ ಇರುವ ಸರಾಸರಿ ವಲಸಿಗರ ಸಂಖ್ಯೆ 10.5 ಲಕ್ಷದ ಬದಲಾಗಿ 2.6 ಲಕ್ಷಕ್ಕೆ ಇಳಿಯಲಿದೆ.

ಗ್ರೀನ್ ಕಾರ್ಡ್ ವಿತರಣೆ ಸಂಖ್ಯೆ ಹೆಚ್ಚುವುದರಿಂದ ಎಚ್1ಬಿ ವೀಸಾ ಪಡೆದು ಅಮೆರಿಕಕ್ಕೆ ಬಂದ ಭಾರತ ಹಾಗೂ ಚೀನಾದ ಟೆಕಿಗಳಿಗೆ ಭಾರೀ ಅನುಕೂಲವಾಗಲಿದೆ. ಒಂದು ಅಂದಾಜಿನ ಪ್ರಕಾರ, 5 ಲಕ್ಷ ಭಾರತೀಯರು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ವಲಸೆ ಬರುವವರ ಸಂಖ್ಯೆ ಕಡಿಮೆ ಆಗಿ, ವಾರ್ಷಿಕ ಗ್ರೀನ್ ಕಾರ್ಡ್ ಕೊಡುವ ಪ್ರಮಾಣ ಹೆಚ್ಚಾದರೆ, ಈಗ ಕಾಯುತ್ತಿರುವವರ ನಿರೀಕ್ಷಣಾ ಅವಧಿ ತಗ್ಗಲಿದೆ.

ADVERTISEMENT

ಆದರೆ ಈ ಕಾಯ್ದೆಯು ಸರಣಿ ವಲಸೆಯನ್ನು ನಿಯಂತ್ರಿಸುವುದರಿಂದಾಗಿ, ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವವರು ತಮ್ಮ ಸಂಗಾತಿ ಮತ್ತು ಚಿಕ್ಕ ಮಕ್ಕಳ ಹೊರತಾಗಿ ಕುಟುಂಬದ ಇತರ ಸದಸ್ಯರನ್ನು ತಮ್ಮೊಂದಿಗೆ ನೆಲೆಸಲು ಅಲ್ಲಿಗೆ ಕರೆಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಮತ್ತು ಉದ್ಯೋಗ ಮಾಡಲು ವ್ಯಕ್ತಿಗೆ ನೀಡುವ ಪರವಾನಗಿಯೇ ಗ್ರೀನ್ ಕಾರ್ಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.