ADVERTISEMENT

ನ್ಯಾಯಾಂಗ ನಿಂದನೆ ಆರೋಪ ಪಾಕ್ ಪ್ರಧಾನಿಗೆ ನೋಟಿಸ್

ಪಿಟಿಐ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಶಾಹಿದ್ ಅಬ್ಬಾಸಿ
ಶಾಹಿದ್ ಅಬ್ಬಾಸಿ   

ಲಾಹೋರ್ : ನ್ಯಾಯಾಂಗ ವಿರೋಧಿ ಹೇಳಿಕೆ ನೀಡಿದ ಆರೋಪದಡಿ ಪಾಕಿಸ್ತಾನ ಪ್ರಧಾನಿ ಶಾಹಿದ್ ಅಬ್ಬಾಸಿ ಅವರಿಗೆ ಇಲ್ಲಿನ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

‘ಪನಾಮಾ ದಾಖಲೆಗಳಿಗೆ ಸಂಬಂಧಿಸಿದ ತೀರ್ಪು ‘ಕಸದ ತುಂಡು’ ಎಂದು ಶಾಹಿದ್ ಹೇಳಿಕೆ ನೀಡಿದ್ದರಿಂದ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

‘ಅಬ್ಬಾಸಿ ಅವರ ಹೇಳಿಕೆ ನ್ಯಾಯಾಂಗ ನಿಂದನೆಗೆ ಸಮ. ನ್ಯಾಯಾಂಗವನ್ನು ವಿವಾದಕ್ಕೆ ಗುರಿಮಾಡಲು ಅವರು ಯತ್ನಿಸುತ್ತಿದ್ದಾರೆ’ ಎಂದು ವಕೀಲ ಅಜರ್ ಸಿದ್ದಿಕಿ ಅವರು ದೂರು ದಾಖಲಿಸಿದ್ದಾರೆ.

ADVERTISEMENT

‘ಅಬ್ಬಾಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದ ವಿಚಾರಣೆ ಪ್ರಾರಂಭಿಸಬೇಕು ಹಾಗೂ ನ್ಯಾಯಾಂಗವನ್ನು ಗುರಿಯಾಗಿಸಿಕೊಂಡು ಅವರು ನೀಡುವ ಹೇಳಿಕೆ
ಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡದಂತೆ ತಡೆಹಿಡಿಯಲು ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ (ಪಿಇಎಂಆರ್‌ಎ) ನಿರ್ದೇಶಿಸಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ವಿಚಾರಣೆಯನ್ನು ಇದೇ 15ಕ್ಕೆ ನಿಗದಿಪಡಿಸಲಾಗಿದೆ. ಅಂದು ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಅಬ್ಬಾಸಿ, ಪಾಕಿಸ್ತಾನ ಸರ್ಕಾರ ಹಾಗೂ ಪಿಇಎಂಆರ್‌ಎಗೆ ನೀಡಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.