ADVERTISEMENT

‘ಮಂಗಳ’ನ ಶಿಲಾಪದರದಲ್ಲಿ ನೀರು?

ಪಿಟಿಐ
Published 18 ಫೆಬ್ರುವರಿ 2018, 19:35 IST
Last Updated 18 ಫೆಬ್ರುವರಿ 2018, 19:35 IST
‘ಮಂಗಳ’ನ ಶಿಲಾಪದರದಲ್ಲಿ ನೀರು?
‘ಮಂಗಳ’ನ ಶಿಲಾಪದರದಲ್ಲಿ ನೀರು?   

ವಾಷಿಂಗ್ಟನ್ (ಪಿಟಿಐ): ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಶಿಲಾಪದರವನ್ನು ಪತ್ತೆಹಚ್ಚಿದ್ದು, ಇದು ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಹೋಲುತ್ತಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜನವರಿ 2004ರಂದು ಕೆಂಪು ಗ್ರಹಕ್ಕೆ ಅಡಿಯಿಟ್ಟ ರೋವರ್ ನೌಕೆಯು 5 ಸಾವಿರ ‘ಮಂಗಳ ದಿನ’ಗಳನ್ನು ಪೂರೈಸಿದೆ. ಇದು ‘ಪರ್ಸೀವರೆನ್ಸ್ ವ್ಯಾಲಿ’ ಎಂಬ ಜಾಗದಲ್ಲಿ ಈಗ ಕಾರ್ಯಾಚರಣೆ ನಡೆಸುತ್ತಿದೆ. ಈ ಜಾಗವು ಎಂಡಿವರ್ ಕುಳಿಯ ದಕ್ಷಿಣ ಇಳಿಜಾರಿನಲ್ಲಿದೆ.

ಪರ್ಸೀವರೆನ್ಸ್ ವ್ಯಾಲಿಯು ಕುತೂಹಲದ ತಾಣ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ರೇ ಅರ್ವಿಡ್‌ಸನ್ ಹೇಳಿದ್ದಾರೆ.

ADVERTISEMENT

‘ರೋವರ್ ಈವರೆಗೆ ಸುತ್ತಾಡಿದ ಎಲ್ಲ ಜಾಗಗಳನ್ನು ಗಮನಿಸಿದಾಗ ಅವುಗಳ ಪೈಕಿ ಈ ಜಾಗ ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ. ಈ ಸ್ಥಳ ಹೇಗೆ ರೂಪುಗೊಂಡಿದೆ ಎಂಬುದನ್ನು ಪತ್ತೆಹಚ್ಚಬೇಕಿದ್ದು, ಅದರ ಮೇಲ್ಮೈಯನ್ನು ಗಮನಿಸುತ್ತಿದ್ದೇವೆ. ಇದು ನೋಡಲು ಶಿಲಾಪದರದ ರೀತಿ ಇದ್ದು, ನಿಗೂಢ ಎನಿಸಿದೆ’ ಎಂದು ಅವರು ಹೇಳಿದ್ದಾರೆ.

ಅಲ್ಲಿ ನೀರು, ಗಾಳಿ ಅಥವಾ ಮಂಜುಗಡ್ಡೆಯ ಪ್ರಕ್ರಿಯೆ ನಡೆದಿರಬಹುದು ಎಂಬ ಸುಳಿವು ಆಧರಿಸಿ ರೋವರ್ ಸಂಶೋಧಕರು ಈಗಾಗಲೇ ವಿಶ್ಲೇಷಣೆ ನಡೆಸುತ್ತಿದ್ದಾರೆ. ಕೆಲವು ವಿವರಣೆಗಳನ್ನೂ ಸಿದ್ಧಪಡಿಸುತ್ತಿದ್ದಾರೆ. ಆದರೆ ಈ ವಿನ್ಯಾಸಗಳು ಗ್ರಹದ ಆಧುನಿಕ ರಚನೆಗಳೇ ಅಥವಾ ಹಳೆಯವೇ ಎಂಬ ಬಗ್ಗೆ ಖಚಿತತೆ ಇಲ್ಲ.

‘ಮಂಗಳ ಗ್ರಹದ ಧ್ರುವ ಪ್ರದೇಶಗಳು ಕಾಲಘಟ್ಟವೊಂದರಲ್ಲಿ ವಿಸ್ತರಿಸಿದಾಗ ಅಲ್ಲಿದ್ದ ನೀರು ಆವಿಯಾಗಿ ವಾತಾವರಣ ಸೇರಿ, ಬಳಿಕ ಹಿಮ ಅಥವಾ ಮಂಜುಗಡ್ಡೆ ರೂಪದಲ್ಲಿ ಸಮಭಾಜಕ ವೃತ್ತದ ಸಮೀಪ ಶೇಖರಣೆಗೊಂಡಿತು. ಅದು ಕಾಲಾಂತರದಲ್ಲಿ ಶಿಲಾಪದರವಾಗಿ ರೂಪಾಂತರಗೊಂಡಿರಬಹುದು’ ಎಂಬ ವಾದ ವಿಜ್ಞಾನಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.