ADVERTISEMENT

ಅಟಾರ್ನಿ ಜನರಲ್‌ಗೆ ಟ್ರಂಪ್ ತರಾಟೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಆರೋಪ

ಏಜೆನ್ಸೀಸ್
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಜೆಫ್ ಸೆಷನ್ಸ್
ಜೆಫ್ ಸೆಷನ್ಸ್   

ವಾಷಿಂಗ್ಟನ್ : 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ರಷ್ಯಾದ ಹಸ್ತಕ್ಷೇಪವನ್ನು ತಡೆಗಟ್ಟಲು ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರ್ಕಾರದ ಅಟಾರ್ನಿ ಜನರಲ್ ಜೆಫ್ ಸೆಷನ್ಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಅಕ್ರಮ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳದ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುತ್ತೇನೆ’ ಎಂದು ಸೆಷ‌ನ್ಸ್‌ ಅವರನ್ನು ಉದ್ದೇಶಿಸಿ ಟ್ರಂಪ್ ಬುಧವಾರ ಟ್ವೀಟ್ ಮಾಡಿದ್ದಾರೆ. 2016ರಲ್ಲಿ ಚುನಾವಣೆ ನಡೆದಾಗ ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿದ್ದರು.

‘ಪ್ರಶ್ನೆ: ಒಬಾಮಾ ಆಡಳಿತದ ವೇಳೆ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆದಿದೆ ಎಂದಾದರೆ ಏಕೆ ತನಿಖೆಗೆ ಆದೇಶಿಸಿಲ್ಲ. ಒಬಾಮಾ ಯಾಕೆ ಕೈಕಟ್ಟಿ ಕೂತರು. ಜೆಫ್ ಸೆಷನ್ಸ್‌ರನ್ನು ಕೇಳಿ!’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ಫೆಡರಲ್ ಕಾನೂನು ವ್ಯವಸ್ಥೆಯನ್ನು ಟ್ರಂಪ್ ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಈ ಸರಣಿಗೆ ಇದೊಂದು ಹೊಸ ಉದಾಹರಣೆಯಾಗಿದೆ. ಎಫ್‌ಬಿಐ ತನ್ನ ವಿರುದ್ಧ ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಅವರು ಈ ಹಿಂದೆ ಆಕ್ಷೇಪಿಸಿದ್ದರು.

ಕಳೆದ ವಾರ ರಷ್ಯಾದ 13 ಮಂದಿ ಹಾಗೂ 3 ಕಂಪನಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಅಮೆರಿಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹದಗೆಡಿಸುವ ಸಲುವಾಗಿ ರಷ್ಯಾ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಪ್ರಭಾವ ಬೀರುತ್ತಲೇ ಬಂದಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ರಷ್ಯಾ ಮಧ್ಯಸ್ಥಿಕೆಯಿಂದ ಟ್ರಂಪ್ ಅವರಿಗೆ ನೆರವಾಗಿದೆ ಎಂಬುದು ಡೆಮಾಕ್ರಟಿಕ್ ಪಕ್ಷದ ಆರೋಪ. ಆದರೆ, ‘ಹಸ್ತಕ್ಷೇಪ ನಡೆದಿದ್ದರೆ ಅದು ಡೆಮಾಕ್ರಟಿಕ್ ಪಕ್ಷದ ಆಡಳಿತದ ಅವಧಿಯಲ್ಲಿಯೇ’‍ ಎಂಬುದು ಟ್ರಂಪ್ ವಾದ.
***
ಹೆಚ್ಚುವರಿ ನಿರ್ಬಂಧಕ್ಕೆ ಚಿಂತನೆ

‘ರಷ್ಯಾ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರುವ ಕುರಿತು ಶ್ವೇತಭವನ ಚಿಂತನೆ ನಡೆಸುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ ವಿಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೃದುಧೋರಣೆ ಹೊಂದಿದ್ದಾರೆ ಎಂಬ ಅಂಶವನ್ನು ಈ ನಿರ್ಧಾರ ತಳ್ಳಿಹಾಕುತ್ತದೆ.

‘ರಷ್ಯಾ ಸೇನೆ ಜೊತೆ ಗಮನಾರ್ಹ ವಹಿವಾಟು ನಡೆಸಿದರೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವದ ಎಲ್ಲ ದೇಶಗಳ ಸರ್ಕಾರಗಳಿಗೂ ಎಚ್ಚರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಈ ವರ್ಷ ನಡೆಯಲಿರುವ ಸಂಸತ್ ಚುನಾವಣೆ ವೇಳೆ ಸಂಭವನೀಯ ಹಸ್ತಕ್ಷೇಪ ತಡೆಯಲೆಂದು ವಿಶೇಷ ಕಾರ್ಯಪಡೆಯೊಂದನ್ನು ರಚಿಸಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.