ADVERTISEMENT

7 ಮಂದಿ ಬಲಿ, ಉಗ್ರರ ಹತ್ಯೆ

ಬ್ರಿಟನ್ ಚುನಾವಣೆಗೂ ಮುನ್ನ ಲಂಡನ್ನಲ್ಲಿ ಅಟ್ಟಹಾಸ

ಪಿಟಿಐ
Published 4 ಜೂನ್ 2017, 17:53 IST
Last Updated 4 ಜೂನ್ 2017, 17:53 IST
7 ಮಂದಿ ಬಲಿ, ಉಗ್ರರ ಹತ್ಯೆ
7 ಮಂದಿ ಬಲಿ, ಉಗ್ರರ ಹತ್ಯೆ   

ಲಂಡನ್ : ಬ್ರಿಟನ್‌ ರಾಜಧಾನಿ ಲಂಡನ್ನಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ‘ಲಂಡನ್‌ ಸೇತುವೆ’ ಬಳಿ ಮೂವರು ಭಯೋತ್ಪಾದಕರು ಶನಿವಾರ ರಾತ್ರಿ ಅಟ್ಟಹಾಸ ಮೆರೆದಿದ್ದಾರೆ.

ವೇಗವಾಗಿ ಚಲಾಯಿಸುತ್ತಿದ್ದ ವ್ಯಾನನ್ನು ಪಾದಚಾರಿಗಳ ಮೇಲೆ ಹರಿಸಿದ್ದು ಮಾತ್ರವಲ್ಲದೇ, ಸಮೀಪದ ಮಾರುಕಟ್ಟೆಯಲ್ಲಿ ಸಿಕ್ಕಸಿಕ್ಕವರಿಗೆ ಚೂರಿಯಿಂದ ಮನಸೋ ಇಚ್ಛೆ ಇರಿದು 7 ಜನರನ್ನು ಹತ್ಯೆ ಮಾಡಿದ್ದಾರೆ. 48 ಮಂದಿಯನ್ನು ಗಾಯಗೊಳಿಸಿದ್ದಾರೆ.

ಜೂನ್‌ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳ ಮುನ್ನ ಈ ಪೈಶಾಚಿಕ ಕೃತ್ಯ ನಡೆದಿದೆ. ದಾಳಿ ನಡೆಸಿದ ಕೇವಲ ಎಂಟು ನಿಮಿಷಗಳಲ್ಲಿ ಮೂವರು ಶಂಕಿತರನ್ನು ಗುಂಡಿಟ್ಟು ಕೊಲ್ಲುವಲ್ಲಿ ಲಂಡನ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

ADVERTISEMENT

ವಿವರ: ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಬಿಳಿ ವ್ಯಾನೊಂದರಲ್ಲಿ ಬಂದ  ಶಂಕಿತರು, ಲಂಡನ್‌ ಸೇತುವೆ ಬಳಿ ವ್ಯಾನನ್ನು ಪಾದಚಾರಿ ಮಾರ್ಗಕ್ಕೆ ನುಗ್ಗಿಸಿ, ಜನರ ಮೇಲೆ ಹರಿಸಿದರು. ಕೈಯಲ್ಲಿ ದೊಡ್ಡ ಚೂರಿ ಹೊಂದಿದ್ದ ಅವರು ವಾಹನ ಬಿಟ್ಟು ಸಮೀಪದ ಬರೊ ಮಾರುಕಟ್ಟೆಯತ್ತ ಓಡಿ ‘ಇದು ಅಲ್ಲಾನಿಗಾಗಿ’ ಎಂದು ಘೋಷಣೆ ಕೂಗುತ್ತಾ ಎದುರಿಗೆ ಸಿಕ್ಕಿದವರ ಮೇಲೆ  ಮನಬಂದಂತೆ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

‘ಗಾಯಗೊಂಡ 48 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೂವರು ಕೂಡ ಸ್ಫೋಟಕಗಳನ್ನು ತುಂಬಿಕೊಂಡಂತೆ ಕಾಣುತ್ತಿದ್ದ ಜಾಕೆಟ್‌ಗಳನ್ನು ಧರಿಸಿದ್ದರು. ನಂತರ ಅದು ನಕಲಿ ಎಂದು ಗೊತ್ತಾಯಿತು’ ಎಂದು ಮೆಟ್ರೊಪಾಲಿಟನ್‌ ಪೊಲೀಸ್‌ ಸಹಾಯಕ ಕಮಿಷನರ್‌ ಮತ್ತು ಬ್ರಿಟನ್ನಿನ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಮಾರ್ಕ್‌ ರೌಲಿ ಹೇಳಿದ್ದಾರೆ.

‘ಇದೊಂದು ಭಯೋತ್ಪಾದನಾ ದಾಳಿ ಎಂದು ನಾವು ಪರಿಗಣಿಸಿದ್ದೇವೆ. ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯನ್ನು ಈಗಾಗಲೇ ಆರಂಭಿಸಲಾಗಿದೆ’ ಎಂದು ಹೇಳಿರುವ ಅವರು, ದಾಳಿಕೋರರ ಬಗ್ಗೆ ಮಾಹಿತಿ ಇದ್ದವರು, ದಾಳಿಯ ಚಿತ್ರವನ್ನು ಸೆರೆ ಹಿಡಿದವರು ಪೊಲೀಸರಿಗೆ ಮಾಹಿತಿ ನೀಡುವಂತೆ ಜನರನ್ನು ಕೋರಿದ್ದಾರೆ. ದಾಳಿ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ.  ದಾಳಿ ನಡೆದ ಪ್ರದೇಶವು ಲಂಡನ್‌ ನಗರದ ಜನಪ್ರಿಯ ತಾಣ. ಇಲ್ಲಿ ಬಾರ್‌, ರೆಸ್ಟೋರೆಂಟ್‌ ಮತ್ತು ಕ್ಲಬ್‌ಗಳು ಹೆಚ್ಚು ಇರುವುದರಿಂದ ವಾರಾಂತ್ಯದ ಮೋಜಿಗಾಗಿ ಭಾರಿ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

12 ಜನರ ಬಂಧನ

ದಾಳಿಗೆ ಸಂಬಂಧಿಸಿದಂತೆ ಪೂರ್ವ ಲಂಡನ್ನಿನ ಬಾರ್ಕಿಂಗ್‌ನಲ್ಲಿ 12 ಜನರನ್ನು ಬಂಧಿಸಿರುವುದಾಗಿ ಬ್ರಿಟನ್‌ ಭಯೋತ್ಪಾದನಾ ನಿಗ್ರಹ ಪೊಲೀಸರು ಹೇಳಿದ್ದಾರೆ.

ಮೂವರು ದಾಳಿಕೋರರಲ್ಲಿ ಒಬ್ಬನಿಗೆ ಸೇರಿದ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದ ನಂತರ ಇವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

* ಇದು ಲಂಡನ್‌ ಜನರ ಮೇಲೆ ನಡೆಸಿದ ಉದ್ದೇಶಪೂರ್ವಕ, ಹೇಡಿತನದ ಕೃತ್ಯ. ಭಯೋತ್ಪಾದಕರು ಗೆಲ್ಲುವುದಕ್ಕೆ ಅವಕಾಶ ನೀಡುವುದಿಲ್ಲ

-ಸಾದಿಕ್‌ ಖಾನ್‌, ಲಂಡನ್‌ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.