ADVERTISEMENT

8.7 ಕೋಟಿ ಬಳಕೆದಾರರ ಮಾಹಿತಿ ಕೇಂಬ್ರಿಜ್‌ ಅನಲಿಟಿಕಾಗೆ: ಫೇಸ್‌ಬುಕ್

ಏಜೆನ್ಸೀಸ್
Published 5 ಏಪ್ರಿಲ್ 2018, 1:43 IST
Last Updated 5 ಏಪ್ರಿಲ್ 2018, 1:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: 2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾ ಜತೆ  8.7 ಕೋಟಿ ಬಳಕೆದಾರರ ದತ್ತಾಂಶ ಹಂಚಿಕೊಳ್ಳಲಾಗಿದೆ ಎಂದು ಫೇಸ್‌ಬುಕ್ ಒಪ್ಪಿಕೊಂಡಿದೆ.

ಈ ಹಿಂದೆ, 5 ಕೋಟಿ ಬಳಕೆದಾರರ ದತ್ತಾಂಶ ಹಂಚಿಕೊಂಡ ಬಗ್ಗೆ ಅಂದಾಜಿಸಲಾಗಿತ್ತು. ದತ್ತಾಂಶ ಹಂಚಿಕೊಂಡ ಬಗ್ಗೆ ಫೇಸ್‌ಬುಕ್ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದೆ.

ಈ ಮಧ್ಯೆ, ಯುರೋಪ್‌ನ ಖಾಸಗಿತನದ ನಿಯಮಗಳ ಪ್ರಕಾರವೇ ಎಲ್ಲ ಬಳಕೆದಾರರಿಗೂ ಟೂಲ್‌ಗಳನ್ನು ಒದಗಿಸುವುದಾಗಿ ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್‌ ಘೋಷಿಸಿದ್ದಾರೆ. ತಮ್ಮ ಡಿಜಿಟಲ್ ದತ್ತಾಂಶವನ್ನು ಕಂಪೆನಿಗಳು ಉಪಯೋಗಿಸುವುದರ ಮೇಲೆ ಜನರಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ಯುರೋಪ್‌ನ ಖಾಸಗಿತನದ ನಿಯಮಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.

ADVERTISEMENT

ಫೇಸ್‌ಬುಕ್‌ ಖಾತೆದಾರರ ಮಾಹಿತಿಗೆ ಕನ್ನ ಹಾಕಿ ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಹೊತ್ತಿರುವ ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಸೇವೆಗೆ ಸಂಬಂಧಿಸಿ ಭಾರತದಲ್ಲಿಯೂ ಇತ್ತೀಚೆಗೆ ವ್ಯಾಪಕ ಚರ್ಚೆಯಾಗಿತ್ತು. ಕೇಂಬ್ರಿಜ್‌ ಅನಲಿಟಿಕಾದ ಭಾರತೀಯ ಸಹವರ್ತಿ ಕಂಪನಿ ‘ಒಬಿಐ’ನ ಸೇವೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಜತೆಗೆ, ಭಾರತದ ಬಳಕೆದಾರರ ಮಾಹಿತಿ ಹಂಚಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫೇಸ್‌ಬುಕ್‌ಗೆ ಎಚ್ಚರಿಕೆಯನ್ನೂ ನೀಡಿದ್ದರು. 2010ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ– ಜೆಡಿಯು, ಕೇಂಬ್ರಿಜ್‌ ಅನಲಿಟಿಕಾ ಮತ್ತು ಒಬಿಐನ ಸೇವೆ ಪಡೆದುಕೊಂಡಿವೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.