ADVERTISEMENT

ಶಾಂತಿ ಒಪ್ಪಂದಕ್ಕೆ ಅರ್ಮೇನಿಯ– ಅಜರ್‌ಬೈಜಾನ್‌ ಸಹಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 19:50 IST
Last Updated 9 ಆಗಸ್ಟ್ 2025, 19:50 IST
ಅರ್ಮೇನಿಯಾ ಪ್ರಧಾನಿ ನಿಕೊಲ್‌ ಪಶಿನ್ಯಾನ್‌ (ಬಲ) ಮತ್ತು ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಮ್ ಅಲಿಯೆವ್ (ಎಡ) ಅವರು ಹಸ್ತಲಾಘವ ಮಾಡುತ್ತಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇಬ್ಬರ ಕೈ ಹಿಡಿದುಕೊಂಡಿದ್ದರು– ಪಿಟಿಐ ಚಿತ್ರ
ಅರ್ಮೇನಿಯಾ ಪ್ರಧಾನಿ ನಿಕೊಲ್‌ ಪಶಿನ್ಯಾನ್‌ (ಬಲ) ಮತ್ತು ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಮ್ ಅಲಿಯೆವ್ (ಎಡ) ಅವರು ಹಸ್ತಲಾಘವ ಮಾಡುತ್ತಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇಬ್ಬರ ಕೈ ಹಿಡಿದುಕೊಂಡಿದ್ದರು– ಪಿಟಿಐ ಚಿತ್ರ    

ವಾಷಿಂಗ್ಟನ್‌: ಮೂರು ದಶಕಗಳಿಗೂ ಹೆಚ್ಚು ಕಾಲ ಸಂಘರ್ಷದಲ್ಲಿ ತೊಡಗಿದ್ದ ಅರ್ಮೇನಿಯ ಹಾಗೂ ಅಜರ್‌ಬೈಜಾನ್‌ ದೇಶಗಳು ಶಾಂತಿ ಒಪ್ಪಂದಕ್ಕೆ ಶನಿವಾರ ಸಹಿ ಹಾಕಿದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ನಡೆದಿದೆ. 

ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮವು ಶ್ವೇತಭವನದಲ್ಲಿ ಶುಕ್ರವಾರ ನಡೆಯಿತು. ಈ ವೇಳೆ ಮಾತನಾಡಿದ ಟ್ರಂಪ್‌ ‘ಎಲ್ಲಾ ಸಂಘರ್ಷಗಳನ್ನು ಶಾಶ್ವತವಾಗಿ ನಿಲ್ಲಿಸಿ ವ್ಯಾಪಾರ, ವಾಣಿಜ್ಯ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಲು, ಪರಸ್ಪರ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಾನತೆಯನ್ನು ಗೌರವಿಸಲು ಎರಡೂ ದೇಶಗಳು ಬದ್ಧವಾಗಿವೆ’ ಎಂದರು. 

‘ಟ್ರಂಪ್‌ ಅವರ ಮಧ್ಯಸ್ಥಿಕೆಯಲ್ಲಿ ಒಪ್ಪಂದ ನಡೆದಿದೆ. ಟ್ರಂಪ್‌ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಿ ಗೌರವಿಸಬೇಕು’ ಎಂದು ಅರ್ಮೇನಿಯ ಪ್ರಧಾನಿ ನಿಕೊಲ್‌ ಪಶಿನ್ಯಾನ್‌ ಮತ್ತು ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್ ಆಲಿಯೇವ್ ಹೇಳಿದ್ದಾರೆ. 

ADVERTISEMENT

ಕ್ರೈಸ್ತರು ಬಹುಸಂಖ್ಯಾತರಾಗಿರುವ ಅರ್ಮೇನಿಯ ಹಾಗೂ ಮುಸ್ಲಿಮರು ಹೆಚ್ಚಿರುವ ಅಜರ್‌ಬೈಜಾನ್ ದೇಶಗಳು ಗಡಿ ಸೇರಿದಂತೆ ಹಲವು ವಿಚಾರಗಳಿಗೆ ಸಂಘರ್ಷದಲ್ಲಿ ತೊಡಗಿದ್ದವು. ವಿವಾದಿತ ಕರಾಬಖ್‌ ಪ್ರದೇಶಕ್ಕಾಗಿ ಎರಡೂ ದೇಶಗಳ ನಡುವೆ ಎರಡು ಬಾರಿ ಯುದ್ಧ ನಡೆದಿದೆ.

2023ರಲ್ಲಿ ನಡೆದ ಯುದ್ಧದಲ್ಲಿ ಅರ್ಮೇನಿಯದಿಂದ ಕರಾಬಖ್‌ ಅನ್ನು ಅಜರ್‌ಬೈಜಾನ್‌ ಮರುವಶಪಡಿಸಿಕೊಂಡಿತು. ಇದರಿಂದ 1 ಲಕ್ಷಕ್ಕೂ ಅಧಿಕ ಅರ್ಮೇನಿಯನ್‌ ಪ್ರಜೆಗಳು ವಲಸೆ ಹೋಗಬೇಕಾಯಿತು. ಶಾಂತಿ ಒಪ್ಪಂದ ಮಾಡಿಕೊಳ್ಳಲು ಕಳೆದ ಮಾರ್ಚ್‌ನಲ್ಲಿ ಎರಡೂ ದೇಶಗಳು ಸಮ್ಮತಿಸಿದ್ದವು.

ಟ್ರಂಪ್‌ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಲು ಸಮಿತಿಗೆ ಶಿಫಾರಸು ಮಾಡುವಂತೆ ನಿಕೊಲ್‌ ಪಶಿನ್ಯಾನ್‌ ಅವರೊಂದಿಗೆ ಜಂಟಿಯಾಗಿ ಮನವಿ ಸಲ್ಲಿಸಲಾಗುವುದು.
 –ಇಲ್ಹಾ –ಇಲ್ಹಾಮ್‌ ಆಲಿಯೇವ್  ಅಜರ್‌ಬೈಜಾನ್‌ ಅಧ್ಯಕ್ಷ ಮ್‌ ಆಲಿಯೇವ್  ಅಜರ್‌ಬೈಜಾನ್‌ ಅಧ್ಯಕ್ಷ
ಇಬ್ಬರೂ ನಾಯಕರು ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸಂಘರ್ಷ ಉಂಟಾದರೆ ಅವರು ನನಗೆ ಕರೆ ಮಾಡುತ್ತಾರೆ. ನಾನು ಅದನ್ನು ಸರಿಪಡಿಸುತ್ತೇನೆ
– ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ 
ಶಾಂತಿಪ್ರಿಯ ಟ್ರಂಪ್‌ ಇಲ್ಲದಿದ್ದರೆ ಒಪ್ಪಂದವು ಸಾಧ್ಯವಾಗುತ್ತಿರಲಿಲ್ಲ. ನಾವು ಶಾಂತಿ ಸಾಧಿಸಿದ್ದೇವೆ. ಇದು ಹೊಸ ಯುಗದ ದಾರಿಯಾಗಿದೆ
–ನಿಕೊಲ್‌ ಪಶಿನ್ಯಾನ್‌ ಅರ್ಮೇನಿಯ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.