ADVERTISEMENT

ಅಫ್ಗಾನ್‌ನ ನಂಗರ್‌ಹರ್ ಪ್ರದೇಶದ ಮಸೀದಿಯಲ್ಲಿ ಸ್ಫೋಟ: 3 ಸಾವು, 15 ಮಂದಿಗೆ ಗಾಯ

ಏಜೆನ್ಸೀಸ್
Published 12 ನವೆಂಬರ್ 2021, 11:17 IST
Last Updated 12 ನವೆಂಬರ್ 2021, 11:17 IST
ಎಎಫ್‌ಪಿ ಸಂಗ್ರಹ ಚಿತ್ರ
ಎಎಫ್‌ಪಿ ಸಂಗ್ರಹ ಚಿತ್ರ   

ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಗಾನಿಸ್ತಾನದ ನಂಗರ್‌ಹರ್ ಪ್ರದೇಶದ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಕನಿಷ್ಠ 3 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ.

ಆಗಸ್ಟ್‌ನಲ್ಲಿ ತಾಲಿಬಾನ್ ಉಗ್ರರು ದೇಶವನ್ನು ಆಕ್ರಮಿಸಿಕೊಂಡ ಬಳಿಕ ಇಸ್ಲಾಮಿಕ್ ಸ್ಟೇಟ್ ಉಗ್ರರ ಚಟುವಟಿಕೆಯ ತಾಣವಾಗಿರುವ ಸ್ಪಿನ್ ಘರ್ ಜಿಲ್ಲೆಯಲ್ಲಿ ಈ ಸ್ಫೋಟ ಸಂಭವಿಸಿದೆ.

‘ಶುಕ್ರವಾರದ ಪ್ರಾರ್ಥನೆ ವೇಳೆ ಸ್ಪಿನ್ ಘರ್ ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಕೆಲವರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ’ಎಂದು ತಾಲಿಬಾನ್ ಅಧಿಕಾರಿ ಎಎಫ್‌ಪಿಗೆ ತಿಳಿಸಿದ್ದಾರೆ.

ADVERTISEMENT

‘ಈವರೆಗೆ ಮೂವರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ’ಎಂದು ಸ್ಥಳಿಯ ಆಸ್ಪತ್ರೆಯು ಎಎಫ್‌ಪಿಗೆ ತಿಳಿಸಿದೆ.

2015ರಲ್ಲಿ ಅಫ್ಗಾನ್‌ನ ನಂಗರ್‌ಹರ್ ಪ್ರದೇಶದಲ್ಲಿ ಅಸ್ತಿತ್ವ ಕಂಡುಕೊಂಡ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯು, ಇತ್ತೀಚೆಗೆ ತಾಲಿಬಾನ್, ದೇಶವನ್ನು ವಶಕ್ಕೆ ಪಡೆದ ನಂತರ ನಡೆದ ಸರಣಿ ಸ್ಫೋಟಗಳ ಹೊಣೆ ಹೊತ್ತುಕೊಂಡಿದೆ.

ನವೆಂಬರ್ ತಿಂಗಳ ಆರಂಭದಲ್ಲಿ ಐಸಿಸ್ ಉಗ್ರನು ಕಾಬೂಲ್ ಮಿಲಿಟರಿ ಆಸ್ಪತ್ರೆಯಲ್ಲಿ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 19 ಮಂದಿ ಮೃತಪಟ್ಟು, 50 ಜನರು ಗಾಯಗೊಂಡಿದ್ದರು.

ಹಜಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎರಡು ಮಸೀದಿಗಳಲ್ಲಿ ಈ ವರ್ಷ ಸಂಭವಿಸಿದ ಸ್ಫೋಟದಲ್ಲಿ 120 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.