ADVERTISEMENT

ಈಕ್ವಟೋರಿಯಲ್ ಗಿನಿಯಲ್ಲಿ ಸ್ಫೋಟ: 20 ಮಂದಿ ಸಾವು, 600 ಜನರಿಗೆ ಗಾಯ

ಏಜೆನ್ಸೀಸ್
Published 8 ಮಾರ್ಚ್ 2021, 5:41 IST
Last Updated 8 ಮಾರ್ಚ್ 2021, 5:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಗ್ವಾಗದೂಗು (ಬುರ್ಕಿನಾ ಫಾಸೊ): ‘ಈಕ್ವಟೋರಿಯಲ್ ಗಿನಿಯ ಮಿಲಿಟರಿ ಬ್ಯಾರಕ್‌ಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾನುವಾರ ಸಂಜೆ 4 ಗಂಟೆಗೆ ಈ ಸ್ಪೋಟ ಸಂಭವಿಸಿದ್ದು, ಬಾಟಾದಲ್ಲಿರುವ ಮೊಂಡೊಂಗ್ ನ್ಕುಂಟೊಮಾ ಬಳಿಯಿರುವ ಮಿಲಿಟರಿ ಬ್ಯಾರಕ್‌ನಲ್ಲಿ ಡೈನಾಮೈಟ್‌ ನಿರ್ವಹಣೆಯಲ್ಲಿ ನಡೆದ ನಿರ್ಲಕ್ಷ್ಯದಿಂದಾಗಿಈ ಸ್ಪೋಟ ಸಂಭವಿಸಿದೆ. ಇದರಿಂದಾಗಿ ಪಕ್ಕದಲ್ಲಿದ್ದ ಮನೆಗಳು ಕೂಡ ಹಾನಿಯಾಗಿವೆ’ ಎಂದು ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ ಅವರು ಹೇಳಿದರು.

‘ಬ್ಯಾರಕ್‌ನಲ್ಲಿ ಶಸ್ತ್ರಾಸ್ತ್ರ ಇರಿಸಲಾಗಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಲ್ಲಿದ್ದಮದ್ದುಗುಂಡುಗಳು ಸ್ಫೋಟಗೊಂಡಿವೆ. ಈ ಸ್ಫೋಟದಲ್ಲಿ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ. 600 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು’ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಬ್ಯಾರಕ್‌ನ ಸುತ್ತಮುತ್ತ ಹೊಲ ಗದ್ದೆಗಳಿದ್ದು, ಜನರು ಅಲ್ಲಿ ಬೆಂಕಿ ಹಾಕಿದ್ದೇ ಬ್ಯಾರಕ್‌ಗೆ ಸಹ ಬೆಂಕಿ ಹರಡಲು ಕಾರಣವಾರಿರಬಹುದು ಎಂದು ಅಧ್ಯಕ್ಷರು ಶಂಕಿಸಿದ್ದಾರೆ.

ADVERTISEMENT

‘ಬಾಟಾದ ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ರಕ್ತದಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಸ್ವ ಇಚ್ಛೆಯಿಂದ ಮುಂದೆ ಬಂದು ಗಾಯಾಳುಗಳಿಗೆ ನೆರವನ್ನು ನೀಡಬೇಕು’ ಎಂದು ಆರೋಗ್ಯ ಸಚಿವಾಲಯವು ಮನವಿ ಮಾಡಿದೆ.

ಆಫ್ರಿಕಾ ಖಂಡದ ಕ್ಯಾಮರೂನ್‌ಗೆ ದಕ್ಷಿಣಕ್ಕಿರುವ ಈ ದೇಶದಲ್ಲಿ 13 ಲಕ್ಷ ಜನಸಂಖ್ಯೆ ಇದ್ದು, 1968ರವರೆಗೆ ಇದು ಸ್ಪೇನ್‌ನ ವಸಾಹತುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.