ADVERTISEMENT

ಬಾಂಗ್ಲಾ: ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ವಿದ್ಯಾರ್ಥಿಗಳು ಸಜ್ಜು

ರಾಯಿಟರ್ಸ್
Published 24 ಫೆಬ್ರುವರಿ 2025, 13:14 IST
Last Updated 24 ಫೆಬ್ರುವರಿ 2025, 13:14 IST
.
.   

ಢಾಕಾ: ಪ್ರಧಾನಿ ಶೇಖ್‌ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಪ್ರತಿಭಟನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಬಾಂಗ್ಲಾದೇಶದ ವಿದ್ಯಾರ್ಥಿಗಳು ಹೊಸ ರಾಜಕೀಯ ಪಕ್ಷ ಕಟ್ಟಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಸಂಘವು ಆರಂಭಿಸಿದ್ದ ಪ್ರತಿಭಟನೆಯು ನಂತರ ವಿದ್ಯಾರ್ಥಿಗಳ ಚಳವಳಿಯಾಗಿ ಮಾರ್ಪಟ್ಟಿತ್ತು. ರಾಷ್ಟ್ರದಾದ್ಯಂತ ದೊಡ್ಡಮಟ್ಟದ ಕ್ರಾಂತಿಗೆ ನಾಂದಿ ಹಾಡಿತ್ತು. ಪರಿಣಾಮವಾಗಿ ಪ್ರಧಾನಿಯಾಗಿದ್ದ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಬೇಕಾಯಿತು.

‘ವಿದ್ಯಾರ್ಥಿಗಳ ತಂಡವು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ತಮ್ಮ ಯೋಜನೆಯನ್ನು ಅಂತಿಮಗೊಳಿಸಿದ್ದಾರೆ. ಬುಧವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಕ್ಷವನ್ನು ಅನಾವರಣಗೊಳಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿದ್ಯಾರ್ಥಿ ಮುಖಂಡ ಮತ್ತು ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ ನಹೀದ್‌ ಇಸ್ಲಾಂ ಅವರು ನೂತನ ಪಕ್ಷದ ಸಂಚಾಲಕರಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ. ಹೊಸ ಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಹಾಲಿ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಿವೆ. ನಹೀದ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘2025ರ ಅಂತ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಯುವಕರ ನೇತೃತ್ವದ ಪಕ್ಷವು ದೇಶದ ರಾಜಕೀಯ ವ್ಯವಸ್ಥೆಗೆ ಮರುರೂಪ ಕೊಡುವ ಸಾಧ್ಯತೆ ಇದೆ ಎಂದು ಹಲವು ಚುನಾವಣಾ ವಿಶ್ಲೇಷಕರು ಅಂದಾಜಿಸಿದ್ದಾರೆ’ ಎಂದು ಹಂಗಾಮಿ ಪ್ರಧಾನಿ ಮಹಮ್ಮದ್‌ ಯೂನಸ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.