ಢಾಕಾ: ಬಾಂಗ್ಲಾದೇಶದ ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಕೆ.ಎಮ್ ನೂರುಲ್ ಹುದಾ ಅವರನ್ನು ಚುನಾವಣಾ ಅಕ್ರಮ ಎಸಗಿದ ಆರೋಪದಲ್ಲಿ ಬಂಧಿಸಲಾಗಿದೆ.
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ನೂರುಲ್ ಹುದಾ ಸೇರಿದಂತೆ 19 ಮಂದಿಯ ವಿರುದ್ಧ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನೀಡಿದ್ದ ದೂರಿನ ಆಧಾರದಲ್ಲಿ ಬಂಧನ ನಡೆದಿದೆ ಎಂದು ಢಾಕಾದ ಡೆಪ್ಯುಟಿ ಪೊಲೀಸ್ ಕಮಿಷನರ್ ಮೊಹಿದುಲ್ ಇಸ್ಲಾಮ್ ಹೇಳಿದ್ದಾರೆ.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯದಲ್ಲಿ ಆಯೋಗದ ಮಾಜಿ ಮುಖ್ಯಸ್ಥರು ಬಂಧನಕ್ಕೊಳಗಾಗಿರುವುದು ಇದೇ ಮೊದಲು ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
ಪೊಲೀಸರು ತೆರಳುವ ಮುನ್ನ ಹುದಾ ಅವರ ಮನೆಗೆ ನುಗ್ಗಿದ್ದ ಗುಂಪೊಂದು ಅವರನ್ನು ಎಳೆತಂದು ಹಲ್ಲೆ ಮಾಡತೊಡಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಹುದಾ ಅವರನ್ನು ಬಂಧಿಸಿದರು. ಹುದಾ ಅವರನ್ನು ಸುತ್ತುವರಿದ ಜನರು ಅವರಿಗೆ ಚಪ್ಪಲಿ ಹಾರ ಹಾಕಿ, ಮೊಟ್ಟೆ ಎಸೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
2014, 2018 ಹಾಗೂ 2024ರ ಸಾರ್ವತ್ರಿಕ ಚುನಾವಣೆಯ ವೇಳೆ ಹುದಾ ಅವರು ಆಯೋಗದ ಮುಖ್ಯಸ್ಥರಾಗಿದ್ದರು. ಈ ಎಲ್ಲ ಚುನಾವಣೆಗಳಲ್ಲೂ ಶೇಖ್ ಹಸೀನಾ ಅವರ ಪಕ್ಷ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.