ADVERTISEMENT

ಅಮೆರಿಕ:‌ ಲಾಯ್ಡ್ ಆಸ್ಟಿನ್ ರಕ್ಷಣಾ ಕಾರ್ಯದರ್ಶಿಯಾಗಿ ನಾಮನಿರ್ದೇಶನ

ಪಿಟಿಐ
Published 9 ಡಿಸೆಂಬರ್ 2020, 6:39 IST
Last Updated 9 ಡಿಸೆಂಬರ್ 2020, 6:39 IST
ಜನರಲ್‌ ಲಾಯ್ಡ್ ಜೆ ಆಸ್ಟಿನ್
ಜನರಲ್‌ ಲಾಯ್ಡ್ ಜೆ ಆಸ್ಟಿನ್   

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ನಿವೃತ್ತ ಸೇನಾ ಜನರಲ್‌ ಲಾಯ್ಡ್ ಜೆ ಆಸ್ಟಿನ್ ಅವರನ್ನುರಕ್ಷಣಾ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.

67 ವರ್ಷದ ಲಾಯ್ಡ್ ಜೆ ಆಸ್ಟಿನ್ ಅವರು ರಕ್ಷಣಾ ಇಲಾಖೆಯನ್ನು ಮುನ್ನಡೆಸಲಿರುವ ಮೊದಲ ಆಫ್ರಿಕನ್‌–ಅಮೆರಿಕನ್‌ ಆಗಿದ್ದಾರೆ. 28ನೇ ರಕ್ಷಣಾ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡಿರುವ ಆಸ್ಟಿನ್ ಅವರು ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

‘ಆಸ್ಟಿನ್‌ ಅವರು ತಮ್ಮ ಪೂರ್ಣ ಜೀವನವನ್ನು ದೇಶದ ಸೇವೆಗಾಗಿ ಸಮರ್ಪಿಸಿದ್ದಾರೆ. ಜನರಲ್‌ ಆಸ್ಟಿನ್‌ ಅವರು ಅತ್ಯುತ್ತಮ ನಾಯಕತ್ವ ಮತ್ತು ಚಾರಿತ್ರ್ಯ’ ಎಂದು ಬೈಡನ್‌ ತಿಳಿಸಿದ್ದಾರೆ.

ADVERTISEMENT

‘ಸದ್ಯದ ಪರಿಸ್ಥಿತಿಗೆ ಎದುರಾಗಿರುವ ಸವಾಲು ಮತ್ತು ಬಿಕ್ಕಟ್ಟುಗಳನ್ನು ಎದುರಿಸುವಲ್ಲಿ ಆಸ್ಟಿನ್‌ ಸಮರ್ಥರು. ನಾನು ಇವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ. ಆಸ್ಟಿನ್‌ ನಮ್ಮ ಸೇನೆಯನ್ನು ಘನತೆಯೊಂದಿಗಿ ಮುನ್ನಡೆಸಲಿದ್ದಾರೆ ಎಂದು ಭಾವಿಸುತ್ತೇನೆ. ಅಲ್ಲದೆ ಜನರ ಸುರಕ್ಷತೆ, ಜಾಗತಿಕ ಬೆದರಿಕೆ ಸೇರಿದಂತೆ ಮೈತ್ರಿ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಇನ್ನಷ್ಟು ವೃದ್ಧಿಸಲಿದ್ದಾರೆ ಎಂಬ ಭರವಸೆ ನನ್ನಗಿದೆ’ ಎಂದು ಬೈಡನ್‌ ಅಭಿಪ್ರಾಯಪಟ್ಟಿದ್ದಾರೆ.

40 ವರ್ಷಗಳ ಸೇವೆಯ ಬಳಿಕ ಜನರಲ್‌ ಆಸ್ಟಿನ್‌ ಅವರು 2016ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದರು. ಅಮೆರಿಕದ ಕೇಂದ್ರೀಯ ಕಮಾಂಡ್‌ನಲ್ಲಿ ಆಸ್ಟಿನ್‌ ಮೊದಲ ಆಫ್ರಿಕನ್‌–ಅಮೆರಿಕನ್‌ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ್ದರು. ಇವರು ಸೇನೆಯ ಅತಿ ಕಷ್ಟಕರ ಕಾರ್ಯಾಚರಣೆ ಮತ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿದ್ದಾರೆ. ಇರಾಕ್‌ ಮತ್ತು ಸಿರಿಯಾದಲ್ಲಿ ಐಎಸ್‌ ಉಗ್ರಗಾಮಿ ಸಂಘಟನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಅಮೆರಿಕ ಸೇನೆಯ 1.5 ಲಕ್ಷ ಯೋಧರನ್ನು ಇರಾಕ್‌ನಿಂದ ಸ್ವದೇಶಕ್ಕೆ ವಾಪಸ್‌ ಕರೆತರೆಯುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.