ADVERTISEMENT

ಉಕ್ರೇನ್‌ನಲ್ಲಿ ಉದ್ವಿಗ್ನ ಸ್ಥಿತಿ: ಮಂಗಳವಾರ ಬೈಡನ್‌–ಪುಟಿನ್‌ಮಾತುಕತೆ

ಏಜೆನ್ಸೀಸ್
Published 5 ಡಿಸೆಂಬರ್ 2021, 11:20 IST
Last Updated 5 ಡಿಸೆಂಬರ್ 2021, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ (ಎಪಿ): ಉಕ್ರೇನ್‌ ನ್ಯಾಟೊ ಪಡೆ ಸೇರಿಕೊಳ್ಳುವುದರ ವಿರುದ್ಧ ದೇಶದ ಗಡಿ ಭಾಗದಲ್ಲಿ ರಷ್ಯಾವು ದೊಡ್ಡಸಂಖ್ಯೆಯಲ್ಲಿ ಸೇನಾಪಡೆ ಜಮಾಯಿಸಿರುವಂತೆಯೇ ಅಮೆರಿಕ ಮತ್ತು ರಷ್ಯಾ ನಡುವಿನ ಉದ್ವಿಗ್ನ ಸ್ಥಿತಿ ಉಲ್ಬಣಿಸಿದ್ದು, ಇದನ್ನು ಶಮನಗೊಳಿಸುವ ಯತ್ನವಾಗಿ ಮಂಗಳವಾರ ಜೋ ಬೈಡನ್‌ ಮತ್ತು ವ್ಲಾಡಿಮಿರ್ ಪುಟಿನ್‌ ಅವರು ವಿಡಿಯೊ ಮೂಲಕ ಮಾತುಕತೆ ನಡೆಸಲಿದ್ದಾರೆ.

‘ಉಕ್ರೇನ್‌ನ ಗಡಿಭಾಗದಲ್ಲಿ ರಷ್ಯಾದ ಸೇನಾ ಚಟುವಟಿಕೆಗಳ ಬಗ್ಗೆ ಅಮೆರಿಕ ಆತಂಕದಿಂದಿದೆ. ಉಕ್ರೇನ್‌ನ ಸಾರ್ವಭೌಮ ಮತ್ತು ರಾಷ್ಟ್ರೀಯ ಏಕತೆಗೆ ಅಮೆರಿಕ ಬೆಂಬಲವಾಗಿ ನಿಲ್ಲಲಿರುವುದನ್ನು ಪುನರುಚ್ಚರಿಸಲಾಗುತ್ತಿದೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಪ್ಸಾಕಿ ತಿಳಿಸಿದ್ದಾರೆ.

ಮಂಗಳವಾರ ಮಾತುಕತೆ ನಡೆಯಲಿರುವುದನ್ನು ರಷ್ಯಾ ಕೂಡಾ ದೃಢಪಡಿಸಿದ್ದು, ಎಷ್ಟು ಹೊತ್ತು ಈ ಮಾತುಕತೆ ನಡೆಯಲಿದೆ ಎಂಬುದನ್ನು ತಿಳಿಸಿಲ್ಲ. ರಷ್ಯಾ ಮೂಲದ ಕ್ರಿಮಿನಲ್‌ ಹ್ಯಾಕಿಂಗ್ ಗ್ಯಾಂಗ್‌ಗಳು ಅಮೆರಿಕದ ವಿರುದ್ಧ ದಾಳಿ ನಡೆಸುತ್ತಿರುವುದರ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಕಳೆದ ಜುಲೈನಲ್ಲಿ ಬೈಡನ್‌ ಮತ್ತು ಪುಟಿನ್‌ ಕೊನೆಯ ಬಾರಿ ಮಾತುಕತೆ ನಡೆಸಿದ್ದರು.

ADVERTISEMENT

ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ?: ರಷ್ಯಾವು ಮುಂದಿನ ತಿಂಗಳು ಉಕ್ರೇನ್‌ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇಂತಹ ಬೆಳವಣಿಗೆ ನಡೆದರೆ ರಷ್ಯಾ ವಿರುದ್ಧ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸಲು ಅಮೆರಿಕ ಚಿಂತನೆ ನಡೆಸಿರುವ ಸುಳಿವನ್ನು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.