ADVERTISEMENT

ಬ್ರಿಕ್ಸ್‌ ರಾಷ್ಟ್ರಗಳು ‘ರಕ್ತಪಿಶಾಚಿ’ಗಳಂತೆ: ಟ್ರಂಪ್‌ ಆಪ್ತ ಪೀಟರ್‌ ನವರೊ ಟೀಕೆ

ಪಿಟಿಐ
Published 9 ಸೆಪ್ಟೆಂಬರ್ 2025, 13:35 IST
Last Updated 9 ಸೆಪ್ಟೆಂಬರ್ 2025, 13:35 IST
<div class="paragraphs"><p>ಪೀಟರ್‌ ನವರೊ</p></div>

ಪೀಟರ್‌ ನವರೊ

   

ನ್ಯೂಯಾರ್ಕ್/ವಾಷಿಂಗ್ಟನ್: ‘ಬ್ರಿಕ್ಸ್‌’ ಗುಂಪಿನ ರಾಷ್ಟ್ರಗಳು ಪರಸ್ಪರ ದ್ವೇಷಿಸುತ್ತವೆ. ಅಲ್ಲದೇ ಅಮೆರಿಕದೊಂದಿಗೆ ವ್ಯಾಪಾರ ನಡೆಸುವ ವೇಳೆ ಅವು ‘ರಕ್ತಪಿಶಾಚಿ’ಗಳಂತೆ ವರ್ತಿಸುತ್ತವೆ. ಹೀಗಾಗಿ ಈ ಮೈತ್ರಿ ಬಹಳ ದಿನ ಉಳಿಯದು ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವರೊ ಹೇಳಿದ್ದಾರೆ. 

‘ರಿಯಲ್‌ ಅಮೆರಿಕ ವಾಯ್ಸ್’ಗೆ ಸೋಮವಾರ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.

ADVERTISEMENT

‘ಐತಿಹಾಸಿಕವಾಗಿ ನೋಡಿದಾಗ, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಪರಸ್ಪರ ದ್ವೇಷಿಸುತ್ತಾ, ಒಂದು ಮತ್ತೊಂದು ರಾಷ್ಟ್ರವನ್ನು ನಾಶ ಮಾಡುತ್ತಾ ಬಂದಿರುವುದು ಗೊತ್ತಾಗುತ್ತದೆ. ಹೀಗಾಗಿ, ಈ ಮೈತ್ರಿ ಗಟ್ಟಿಯಾಗಿ ಇರುತ್ತದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ನವರೊ ಹೇಳಿದ್ದಾರೆ.

ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕಾಗಿ ಭಾರತದ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ನವರೊ, ‘ಭಾರತ ಕೂಡ ದಶಕಗಳಿಂದ ಚೀನಾದೊಂದಿಗೆ ಯುದ್ಧ ನಡೆಸುತ್ತಿದೆ’ ಎಂದು ಹೇಳಿದ್ದಾರೆ.

‘ಪಾಕಿಸ್ತಾನಕ್ಕೆ ಚೀನಾ ಅಣುಬಾಂಬ್‌ ನೀಡಿದೆ. ಅಲ್ಲದೇ, ಹಿಂದೂ ಮಹಾಸಾಗರದಲ್ಲಿ ಚೀನಾ ಯುದ್ಧನೌಕೆಗಳು ಸಂಚರಿಸುತ್ತಿವೆ. ರಷ್ಯಾ ಕೂಡ ಈಗ ಚೀನಾ ಜೊತೆ ಕೈಜೋಡಿಸಿದೆ’ ಎಂದ ಅವರು, ‘ಪ್ರಧಾನಿ ಮೋದಿಯವರೇ, ನಿಮ್ಮ ಕಾರ್ಯವೈಖರಿ ಹೇಗಿದೆ ನೋಡಿ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

‘ಒಂದಿಲ್ಲ ಒಂದು ದಿನ ಅಮೆರಿಕ ಜೊತೆ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮುಂದಾಗಲೇಬೇಕು’ ಎಂದು ಎಚ್ಚರಿಸಿದ ಅವರು, ‘ಒಂದು ವೇಳೆ ಇಂತಹ ಒಪ್ಪಂದ ಮಾಡಿಕೊಳ್ಳದಿದ್ದಲ್ಲಿ, ರಷ್ಯಾ ಮತ್ತು ಚೀನಾ ಮುಂದೆ ಭಾರತ ಶರಣಾಗಬೇಕಾಗುತ್ತದೆ’ ಎಂದು ನವರೊ ಎಚ್ಚರಿಸಿದ್ದಾರೆ. 

ಅಮೆರಿಕಕ್ಕೆ ತಮ್ಮ ಸರಕುಗಳನ್ನು ರಫ್ತು ಮಾಡದಿದ್ದರೆ ಬ್ರಿಕ್ಸ್‌ನ ಯಾವ ರಾಷ್ಟ್ರವೂ ಬದುಕುಳಿಯದು.  ಒಂದು ವೇಳೆ ಸರಕುಗಳನ್ನು ರಫ್ತು ಮಾಡಿದರೂ ಅವುಗಳು ಅನುಸರಿಸುವ ನ್ಯಾಯಸಮ್ಮತವಲ್ಲದ ವ್ಯಾಪಾರ ನೀತಿಗಳಿಂದಾಗಿ ಅವು ನಮ್ಮ ರಕ್ತ ಹೀರುತ್ತವೆ.
ಪೀಟರ್‌ ನವರೊ ಶ್ವೇತಭವನದ ವ್ಯಾಪಾರ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.