
ಕಾಂಬೋಡಿಯಾ–ಥಾಯ್ಲೆಂಡ್ ಸಂಘರ್ಷದಿಂದಾಗಿ ಗಡಿ ಪ್ರದೇಶಗಳಿಂದ ಸ್ಥಳಾಂತರಗೊಂಡಿರುವ ಜನರು ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದರು
–ಎಎಫ್‌ಪಿ ಚಿತ್ರ
ಸುರಿನ್ (ಥಾಯ್ಲೆಂಡ್): ಕಾಂಬೋಡಿಯಾ ಹಾಗೂ ಥಾಯ್ಲೆಂಡ್ ನಡುವೆ ನಡೆಯುತ್ತಿರುವ ಸಂಘರ್ಷ ಮಂಗಳವಾರ ಮತ್ತಷ್ಟು ತೀವ್ರಗೊಂಡಿದೆ. ಎರಡೂ ರಾಷ್ಟ್ರಗಳು ಒಂದರ ವಿರುದ್ಧ ಮತ್ತೊಂದು ತೀವ್ರವಾಗಿ ಹೋರಾಡುವ ಶಪಥ ಮಾಡಿವೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಕದನವಿರಾಮ ಒಪ್ಪಂದವನ್ನು ಭಾನುವಾರ ಉಲ್ಲಂಘಿಸಲಾಗಿದೆ ಎಂದು ಈ ರಾಷ್ಟ್ರಗಳು ಪರಸ್ಪರ ದೂರಿಕೊಂಡಿದ್ದವು.
ತನ್ನ ಗಡಿ ಪ್ರದೇಶಗಳನ್ನು ಗುರಿಯಾಗಿಸಿ ಕಾಂಬೋಡಿಯಾ ಸೇನೆ ಮೊದಲು ದಾಳಿ ನಡೆಸಿದೆ ಎಂದು ಆರೋಪಿಸಿದ್ದ ಥಾಯ್ಲೆಂಡ್, ಪ್ರತಿಯಾಗಿ ಯುದ್ಧವಿಮಾನಗಳ ಮೂಲಕ ಗಡಿಯಲ್ಲಿ ಸೋಮವಾರ ದಾಳಿ ನಡೆಸಿತ್ತು.
ಯುದ್ಧ ಬಯಸದ ಕಾರಣಕ್ಕೆ ಪ್ರತಿದಾಳಿ ನಡೆಸಲಿಲ್ಲ ಎಂದು ಹೇಳಿಕೊಂಡಿದ್ದ ಕಾಂಬೋಡಿಯಾ, ಮಂಗಳವಾರ ತಾನೂ ರಣರಂಗಕ್ಕೆ ಕಾಲಿಟ್ಟಿರುವುದಾಗಿ ಘೋಷಿಸಿದೆ. ‘ಕಾಂಬೋಡಿಯಾ ಶಾಂತಿಯನ್ನು ಬಯಸುತ್ತಿದೆ. ಆದರೆ, ನಮ್ಮ ರಾಷ್ಟ್ರದ ರಕ್ಷಣೆಗೆ ನಾವು ಹೋರಾಟ ಮಾಡಲೇಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ’ ಎಂದು ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಹೇಳಿದ್ದಾರೆ.
ಮಂಗಳವಾರ ಎರಡೂ ಕಡೆಯ ಸೇನೆಗಳು ಗಡಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಈ ವೇಳೆ ಕಾಂಬೋಡಿಯಾದ 7 ಮಂದಿ ನಾಗರಿಕರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಥಾಯ್ಲೆಂಡ್‌ನಲ್ಲಿ ಒಬ್ಬ ಯೋಧ ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ ಎಂದು ಆಯಾ ರಾಷ್ಟ್ರಗಳ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಕಾಂಬೋಡಿಯಾ ರಾಕೆಟ್ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸುತ್ತಿದೆ ಎಂದು ದೂರಿರುವ ಥಾಯ್ಲೆಂಡ್, ತನ್ನ ನೌಕಾಪಡೆಯೂ ಹೋರಾಟಕ್ಕೆ ಸಜ್ಜುಗೊಳ್ಳುತ್ತಿದೆ ಎಂದು ತಿಳಿಸಿದೆ. ಅಲ್ಲದೇ, ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿರುವ ಕಾರಣ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. 1.25 ಲಕ್ಷ ಜನರಿಗೆ ಆಶ್ರಯ ಒದಗಿಸಬಲ್ಲ 500ಕ್ಕೂ ಅಧಿಕ ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.