ADVERTISEMENT

‘ಮಿಶ್ರ ಲಸಿಕೆ‘ ಹಾಕಿಸುವತ್ತ ಹಲವು ದೇಶಗಳ ಚಿತ್ತ

‘ಮಿಕ್ಸ್‌ ಮತ್ತು ಮ್ಯಾಚ್‌‘ ಲಸಿಕೆ ಪ್ರಯೋಗಕ್ಕೆ ಮುಂದಾದ ಹಲವು ರಾಷ್ಟ್ರಗಳು

ಪಿಟಿಐ
Published 31 ಮೇ 2021, 8:01 IST
Last Updated 31 ಮೇ 2021, 8:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೆಲ್ಬರ್ನ್‌: ‘ನಾನು ಮೊದಲ ಡೋಸ್‌ ಆಗಿ ಫೈಜರ್ ಲಸಿಕೆ ತಗೊಂಡಿದ್ದೆ, ಈಗ ಎರಡನೇ ಡೋಸ್‌ ಆಸ್ಟ್ರಾಜೆನಕಾ ಕಂಪನಿಯ ಲಸಿಕೆ ತೆಗೆದುಕೊಳ್ಳಬಹುದಾ?’ ಎಂಬ ಸಾಮಾನ್ಯ ಪ್ರಶ್ನೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯ, ಸಂಶೋಧನೆಯ ವಿಷಯವಾಗಿದ್ದು, ಹಲವು ದೇಶಗಳು ಇಂತಹ ಪ್ರಯತ್ನವನ್ನೂ ಆರಂಭಿಸಿವೆ.‌

ಸ್ಪೇನ್ ಮತ್ತು ಬ್ರಿಟನ್‌ನಲ್ಲಿ ಈ ರೀತಿ ‘ಬೆರಕೆ ಲಸಿಕೆ (ಮಿಕ್ಸ್‌ ಮತ್ತು ಮ್ಯಾಚ್‌)‘ ಪಡೆದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ದತ್ತಾಂಶಗಳ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ದತ್ತಾಂಶಗಳು ತುಂಬಾ ಭರವಸೆ ನೀಡುವಂತಹ ಮಾಹಿತಿಯನ್ನು ಒಳಗೊಂಡಿದ್ದು, ಆ ಪ್ರಕಾರ, ಒಂದು ಲಸಿಕೆಯ ಎರಡು ಡೋಸ್‌ ಪಡೆದಾಗ ದೇಹದಲ್ಲಿ ಸೃಷ್ಟಿಯಾಗುವ ಪ್ರತಿಕಾಯಗಳಿಗಿಂತ, ಬೆರಕೆ ಲಸಿಕೆ ಪಡೆಯುವುದರಿಂದ ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾದಲ್ಲಿ ಈ ಮಿಕ್ಸ್ ಮತ್ತು ಮ್ಯಾಚ್‌ ಲಸಿಕೆ ಪ್ರಕ್ರಿಯೆಗೆ ಅನುಮತಿ ನೀಡಿಲ್ಲ. ಆದರೆ, ಸ್ಪೇನ್, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಚಾಲ್ತಿಯಲ್ಲಿದೆ.

ADVERTISEMENT

ಲಸಿಕೆ ಕೊರತೆಗೆ ಪರಿಹಾರ

ಲಸಿಕೆ ಕೊರತೆ ಎದರಾಗುವ ಸಂದರ್ಭದಲ್ಲಿ ಈ ಬೆರೆಕೆ ಲಸಿಕೆ ನೀಡುವ ಕ್ರಮ ಸಹಾಯವಾಗುತ್ತದೆ. ಮೊದಲ ಡೋಸ್‌ನಲ್ಲಿ ಅಸ್ಟ್ರಾಜೆನಕಾ ಲಸಿಕೆ ನೀಡಿ, ಎರಡನೇ ಡೋಸ್‌ನಲ್ಲಿ ಆ ಲಸಿಕೆ ದಾಸ್ತಾನು ಇಲ್ಲದಿದ್ದಾಗ, ಬೇರೆ ಲಸಿಕೆ ನೀಡಬಹುದು. ಜತೆಗೆ, ಲಸಿಕೆ ಅಭಿಯಾನದ ವೇಗ ಹೆಚ್ಚಿಸಲು ಇದು ನೆರವಾಗುತ್ತದೆ. ಒಂದು ಲಸಿಕೆ ಕೊರತೆಯಾಗಿದೆ ಎಂಬ ಕಾರಣಕ್ಕೆ ‘ಲಸಿಕಾ ಅಭಿಯಾನ‘ ನಿಲ್ಲಿಸುವ ಬದಲು, ಬೇರೆ ಲಸಿಕೆಯೊಂದಿಗೆ ಮುಂದುವರಿಸಬಹುದಾಗಿದೆ.

ಯುರೋಪಿನ ಹಲವಾರು ದೇಶಗಳು ಈಗ ಈ ಲಸಿಕೆಯನ್ನು ಮೊದಲ ಡೋಸ್‌ನಂತೆ ನೀಡಿದ್ದ ಕಿರಿಯರಿಗೆ ತಮ್ಮ ಎರಡನೇ ಡೋಸ್‌ನಂತೆ ಪರ್ಯಾಯ ಲಸಿಕೆಯನ್ನು ಪಡೆಯಬೇಕು ಎಂದು ಸಲಹೆ ನೀಡುತ್ತಿವೆ.

ಒಂದು ಲಸಿಕೆ ರೂಪಾಂತರ ವೈರಸ್‌ ವಿರುದ್ಧ ಕಡಿಮೆ ಪರಿಣಾಮಕಾರಿ ಗುಣವನ್ನು ಹೊಂದಿದ್ದರೆ, ಬದಲಿ ಲಸಿಕೆ ನೀಡುವುದರಿಂದ ಹಿಂದಿನ ಡೋಸ್‌ನ ಕೊರತೆಯನ್ನು ತುಂಬಿಕೊಳ್ಳಬಹುದು. ಈ ಮೂಲಕ ರೂಪಾಂತರ ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಜರ್ಮನಿ, ಫ್ರಾನ್ಸ್, ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್ ‘ಮಿಶ್ರ ಲಸಿಕೆ‘ಯನ್ನು ತಮ್ಮ ಲಸಿಕಾ ವೇಳಾಪಟ್ಟಿ‘ಯಲ್ಲಿ ಸೇರಿಸಿವೆ. ಯುರೋಪಿನ ಹಲವು ದೇಶಗಳು ಮೊದಲ ಡೋಸ್‌ ಆಗಿ ಅಸ್ಟ್ರಾಜೆನಕಾ ಲಸಿಕೆಯನ್ನು ನೀಡಿದ್ದ ಕಿರಿಯರಿಗೆ, ತಮ್ಮ ಎರಡನೇ ಡೋಸ್‌ನಂತೆ ಫೈಜರ್‌ನಂತಹ ಪರ್ಯಾಯ ಲಸಿಕೆಯನ್ನು ಪಡೆಯಲು ಸಲಹೆ ನೀಡುತ್ತಿವೆ.

ಇದು ಸುರಕ್ಷಿತವೇ?

ಮೇ ತಿಂಗಳ ವೈದ್ಯಕೀಯ ಪತ್ರಿಕೆ ‘ಲ್ಯಾನ್ಸೆಟ್‌‘ನಲ್ಲಿ ಪ್ರಕಟವಾದ ‘ಯುಕೆ ಮಿಕ್ಸ್ ಮತ್ತು ಮ್ಯಾಚ್‘ ಅಧ್ಯಯನ ವರದಿ ಪ್ರಕಾರ, ‘50 ವರ್ಷಕ್ಕಿಂತ ಮೇಲ್ಪಟ್ಟ 830 ವಯಸ್ಕರಿಗೆ ಮೊದಲು ಫೈಜರ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳನ್ನು ಪಡೆಯಲು ತಿಳಿಸಲಾಯಿತು. ನಂತರ ಬೆರೆ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಯಿತು. ಇದು ಅಧ್ಯಯನಕ್ಕಾಗಿ ಯಾದೃಚ್ಛಿಕ (ರ‍್ಯಾಂಡಮೈಸ್ಡ್‌)ವಾಗಿ ಆಯ್ಕೆ ಮಾಡಿಕೊಂಡಿದ್ದಾಗಿತ್ತು.‌

ಇವರಲ್ಲಿ ಎರಡನೇ ಡೋಸ್ ಪಡೆದ ನಂತರ, ಶೀತ, ಆಯಾಸ, ಜ್ವರ, ತಲೆನೋವು, ಸಂದಿವಾತ, ಅಸ್ವಸ್ಥತೆ, ಸ್ನಾಯು ಸೆಳೆತ ಮತ್ತು ಇಂಜೆಕ್ಷನ್ ಸ್ಥಳದಲ್ಲಿ ನೋವು ಸೇರಿದಂತೆ ಮಿಶ್ರ ಅನುಭವವಗಳಾದವು. ಆದರೆ ಅದು ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣದ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇವೆಲ್ಲ ಅಲ್ಪಕಾಲದ ರೋಗಲಕ್ಷಣಗಳಾಗಿದ್ದವು. ಹಾಗಾಗಿ ಪ್ಯಾರಾಸಿಟಮಲ್‌ನಂತಹ ಮಾತ್ರೆಗಳನ್ನು ನೀಡಿ, ಈ ರೋಗಗಳನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಅರಿತುಕೊಂಡರು.

ಮಿಶ್ರ ಲಸಿಕೆ ಪ್ರಕ್ರಿಯೆ ಪರಿಣಾಮಕಾರಿಯೇ ?

ಆರಂಭದಲ್ಲಿ ಅಸ್ಟ್ರಾಜೆನೆಕಾ ಲಸಿಕೆ ಪಡೆದು, ನಂತರ ಫೈಜರ್ ಬೂಸ್ಟರ್ ಸ್ವೀಕರಿಸಿದವರಲ್ಲಿ 14 ದಿನಗಳ ನಂತರ ಹೆಚ್ಚಿನ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಸ್ಪ್ಯಾನಿಷ್ ಅಧ್ಯಯನದಿಂದ ತಿಳಿದುಬಂದಿದೆ. ಈ ಪ್ರತಿಕಾಯಗಳು ಲ್ಯಾಬ್ ಪರೀಕ್ಷೆಗಳಲ್ಲಿ ಕೊರೋನವೈರಸ್ ಅನ್ನು ಗುರುತಿಸಲು ಮತ್ತು ನಿಷ್ಕ್ರಿಯಗೊಳಿಸಲು ಸಾಧ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಪ್ರಯೋಗಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.