ADVERTISEMENT

ಚೀನಾದ ಬೆದರಿಕೆ ಹತ್ತಿಕ್ಕಲು ಹೊಸ ನ್ಯಾಟೊ ಮೈತ್ರಿ: ಸುನಕ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 12:18 IST
Last Updated 25 ಜುಲೈ 2022, 12:18 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ‘ಬ್ರಿಟನ್ ಮತ್ತು ವಿಶ್ವದ ಭದ್ರತೆ ಮತ್ತು ಅಭ್ಯುದಯಕ್ಕೆ ಚೀನಾವು ಅತಿದೊಡ್ಡ ಬೆದರಿಕೆಯಾಗಿದೆ. ಅಮೆರಿಕದಿಂದ ಭಾರತದವರೆಗೂ‌ ಬರುವ ಎಲ್ಲ ದೇಶಗಳನ್ನು ಅದು ಗುರಿಯಾಗಿಸಿಕೊಂಡಿರುವುದಕ್ಕೆ ಸಾಕ್ಷ್ಯವೂ ಇದೆ’ ಎಂದು ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಸೋಮವಾರ ಹೇಳಿದ್ದಾರೆ.

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಪ್ರಧಾನಿ ಆಯ್ಕೆಯ ಸ್ಪರ್ಧೆಯಲ್ಲಿ ಉಳಿದಿರುವ ಅಂತಿಮ ಇಬ್ಬರು ಅಭ್ಯರ್ಥಿಗಳಲ್ಲಿ ಭಾರತೀಯ ಮೂಲದ ರಿಷಿಸುನಕ್ ಕೂಡ ಒಬ್ಬರು.

‘ಚೀನಾ ಮತ್ತು ರಷ್ಯಾ ವಿಚಾರದಲ್ಲಿ ರಿಷಿ ದುರ್ಬಲರಾಗಿದ್ದಾರೆ’ ಎಂದು ಅವರ ಪ್ರತಿಸ್ಪರ್ಧಿ, ವಿದೇಶಾಂಗ ಸಚಿವೆ ಲಿಜ್ ಟ್ರಸ್‌ ಮಾಡಿರುವ ಆರೋಪಕ್ಕೆರಿಷಿ ಸುನಕ್‌ ಪ್ರತ್ಯುತ್ತರವಾಗಿಚೀನಾ ವಿರುದ್ಧ ಕಠಿಣ ನಿಲುವು ತಳೆಯುವ ಭರವಸೆ ನೀಡಿದ್ದಾರೆ.

ADVERTISEMENT

ಪ್ರಧಾನಿಯಾದರೆ, ಚೀನಾದ ‘ತಾಂತ್ರಿಕ ಆಕ್ರಮಣ’ದ ವಿರುದ್ಧ ಹೋರಾಡಲು ಅಮೆರಿಕ, ಭಾರತ ಒಳಗೊಂಡಂತೆ ‘ಮುಕ್ತ ರಾಷ್ಟ್ರಗಳು’ ಕಲ್ಪನೆಯ ಹೊಸ ನ್ಯಾಟೊ ಶೈಲಿಯ ವಿಶಾಲ ಸೇನಾ ಮೈತ್ರಿ ರಚಿಸುವ ವಿಶ್ವಾಸವಿದೆ ಎಂದು ಸುನಕ್‌ ಹೇಳಿದ್ದಾರೆ.

‘ಚೀನಾವು ನಮ್ಮ ತಂತ್ರಜ್ಞಾನ ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾಲಯಗಳಿಗೆ ನುಸುಳುತ್ತಿದೆ. ರಷ್ಯಾದ ತೈಲ ಖರೀದಿಸುವ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೆರವು ನೀಡುತ್ತಿದೆ. ತೈವಾನ್ ಸೇರಿ ನೆರೆಹೊರೆಯ ದೇಶಗಳನ್ನು ಬೆದರಿಸಲು ಪ್ರಯತ್ನಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಅಧಿಕಾರ ಸಿಕ್ಕ ತಕ್ಷಣ, ‘ಬ್ರಿಟನ್‌ನಲ್ಲಿ ಚೀನಾದ ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನಿ ಪ್ರಭಾವ ವಿಸ್ತರಿಸಲು ಅವಕಾಶ ನೀಡುವುದಿಲ್ಲ. ಬ್ರಿಟನ್‌ನಲ್ಲಿರುವ ಎಲ್ಲ 30 ಕನ್ಫ್ಯೂಷಿಯಸ್ ಸಂಸ್ಥೆಗಳನ್ನು ಮುಚ್ಚಲಾಗುವುದು. ನಮ್ಮ ವಿಶ್ವವಿದ್ಯಾಲಯಗಳಿಂದ ಚೀನಿ ಕಮ್ಯುನಿಸ್ಟ್ ಪಕ್ಷ ಹೊರದಬ್ಬಲಾಗುವುದು. ನಮ್ಮ ಬೇಹುಗಾರಿಕೆ ಸಂಸ್ಥೆ ಎಂಐ5 ಅನ್ನು ಚೀನಿ ಬೇಹುಗಾರಿಕೆ ಹತ್ತಿಕ್ಕಲು ಬಳಸಲಾಗುವುದು. ಚೀನಾದ ಸೈಬರ್‌ ಬೆದರಿಕೆಗಳನ್ನು ನ್ಯಾಟೊ ಶೈಲಿಯಲ್ಲಿ ಅಂತರರಾಷ್ಟ್ರೀಯ ಸಹಕಾರದಿಂದನಿಭಾಯಿಸಲಾಗುವುದು’ ಎಂದು ಸುನಕ್‌ ಭರವಸೆಗಳನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.