ADVERTISEMENT

ಮಾನವ ಹಕ್ಕು ಉಲ್ಲಂಘಿಸಿದ ಚೀನಾ: ಪೋಂಪಿಯೊ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 20:27 IST
Last Updated 27 ನವೆಂಬರ್ 2019, 20:27 IST
ಮೈಕ್‌ ಪೋಂಪಿಯೊ
ಮೈಕ್‌ ಪೋಂಪಿಯೊ   

ವಾಷಿಂಗ್ಟನ್‌(ಪಿಟಿಐ): ‘ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಮುಸ್ಲಿಮರನ್ನು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರನ್ನು ಸಾಮೂಹಿಕವಾಗಿ ಬಂಧನದಲ್ಲಿರಿಸುವ ಮೂಲಕ ಚೀನಾದ ಕಮ್ಯುನಿಸ್ಟ್ ಪಕ್ಷ ನೇತೃತ್ವದ ಸರ್ಕಾರವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೋಂಪಿಯೊ ಹೇಳಿದ್ದಾರೆ.

ಇಲ್ಲಿನ ವಿದೇಶಾಂಗ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಈ ದಬ್ಬಾಳಿಕೆಯಲ್ಲಿ ಚೀನಾದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಈಚೆಗೆ ಸೋರಿಕೆಯಾಗಿರುವ ದಾಖಲೆಗಳಿಂದ ಬಹಿರಂಗಗೊಂಡಿದೆ’ ಎಂದಿದ್ದಾರೆ.

‘ಚೀನಾದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಈಗ ಹಲವು ದೇಶಗಳು ತಿಳಿದುಕೊಂಡಿವೆ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿರುವ ಜನರ ಮಾನವ ಹಕ್ಕುಗಳ ರಕ್ಷಣೆಗಾಗಿ ಅಮೆರಿಕದ ಜೊತೆ ಕೈಜೋಡಿಸಿವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಕ್ರಮವಾಗಿ ಬಂಧಿಸಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ತನ್ನದೇ ಪ್ರಜೆಗಳನ್ನು ಭಯಭೀತರನ್ನಾಗಿಸುವ ಕಠಿಣ ನೀತಿಗಳನ್ನು ಕೈಬಿಡಬೇಕು’ ಎಂದು ಚೀನಾ ಸರ್ಕಾರವನ್ನು ಪೋಂಪಿಯೊ ಒತ್ತಾಯಿಸಿದ್ದಾರೆ.

‘ಕೇವಲ ಮಸ್ಲಿಮರಷ್ಟೇ ಅಲ್ಲ. ಕ್ರೈಸ್ತರು, ಟಿಬೆಟ್‌ನ ಜನರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರೂ ಚೀನಾದ ಅಧಿಕಾರಿಗಳ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.