ADVERTISEMENT

‘ಸೇನೆ ಹಿಂಪಡೆಯದೆ ಕದನ ವಿರಾಮವಿಲ್ಲ’: ಉಕ್ರೇನ್‌ ಸ್ಪಷ್ಟ ನುಡಿ

ಉಕ್ರೇನ್‌ ಸ್ಪಷ್ಟ ನುಡಿ; ಮತ್ತೆ 771 ಸೈನಿಕರು ಶರಣಾಗತಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 15:35 IST
Last Updated 19 ಮೇ 2022, 15:35 IST
   

ಕೀವ್‌ (ಎಪಿ/ಎಎಫ್‌ಪಿ): ‘ಎಲ್ಲ ಪಡೆಗಳನ್ನು ಹಿಂಪಡೆಯುವವರೆಗೂ ಕದನ ವಿರಾಮ ಒಪ್ಪುವುದಿಲ್ಲ’ ಎಂದು ಉಕ್ರೇನ್, ರಷ್ಯಾಕ್ಕೆ ಖಡಕ್ಕಾಗಿ ಹೇಳಿದೆ.

‘ನಮ್ಮ ಮುಂದೆ ಕದನ ವಿರಾಮದ ಪ್ರಸ್ತಾಪ ಇಡಬೇಡಿ.ರಷ್ಯಾ ಸಂಪೂರ್ಣಸೇನೆಹಿಂತೆಗೆದುಕೊಳ್ಳದೆ ಕದನ ವಿರಾಮ ಅಸಾಧ್ಯ’ ಎಂದುರಷ್ಯಾ ಜತೆಗೆ ಹಲವು ಸುತ್ತಿನ ಶಾಂತಿ ಮಾತುಕತೆಗಳಲ್ಲಿ ಭಾಗಿಯಾಗಿದ್ದಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಸಲಹೆಗಾರ ಮಿಖಾಯಿಲೊಪೊಡೊಲ್ಯಾಕ್ಗುರುವಾರ ಟ್ವೀಟ್‌ ಮಾಡಿದ್ದಾರೆ.

ಪೂರ್ವ ಉಕ್ರೇನ್‌ಗೆ ಸಂಬಂಧಿಸಿ 2015ರಲ್ಲಿ ಬೆಲರೂಸ್‌ನ ರಾಜಧಾನಿ ಮಿನ್ಸ್ಕ್‌ನಲ್ಲಿ ಫ್ರಾನ್ಸ್‌ ಮತ್ತು ಜರ್ಮನಿಯ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದ ಉಲ್ಲೇಖಿಸಿ ಅವರು, ‘ಉಕ್ರೇನ್ ಹೊಸ ‘ಮಿನ್ಸ್ಕ್‌’ ಒಪ್ಪಂದ ಮತ್ತು ಕೆಲವೇ ವರ್ಷಗಳಲ್ಲಿ ಹೊಸ ಯುದ್ಧ ನಡೆಸುವುದರಲ್ಲಿ ಆಸಕ್ತಿ ಹೊಂದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಆಕ್ರಮಿತ ಪ್ರದೇಶಗಳನ್ನು ಸಂಪೂರ್ಣ ಸ್ವತಂತ್ರಗೊಳಿಸಲು ರಷ್ಯಾ ಸಿದ್ಧವಾಗುವವರೆಗೆ, ಶಸ್ತ್ರಾಸ್ತ್ರಗಳು, ನಿರ್ಬಂಧಗಳು ಹಾಗೂ ಹಣಕಾಸು ನೆರವು ನಮ್ಮ ಒಟ್ಟು ತೀರ್ಮಾನ’ ಎಂದು ಅವರು ಹೇಳಿದ್ದಾರೆ.

ಶರಣಾದ ಸೈನಿಕರ ಸಂಖ್ಯೆ1,730ಕ್ಕೆ ಏರಿಕೆ:

ಮರಿಯುಪೊಲ್‌ನಲ್ಲಿ ಪ್ರತಿರೋಧ ತೋರುತ್ತಿದ್ದ ಉಕ್ರೇನಿನ 771 ಸೈನಿಕರು ಕಳೆದ 24 ತಾಸುಗಳಲ್ಲಿ ಶರಣಾಗಿದ್ದು, ಭದ್ರಕೋಟೆ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರ ತೊರೆದ ಉಕ್ರೇನ್‌ ಸೈನಿಕರ ಸಂಖ್ಯೆ 1,730ಕ್ಕೆ ಏರಿದೆ.

‘ಅಜೋವ್ ರಾಷ್ಟ್ರೀಯತಾವಾದಿ ಬೆಟಾಲಿಯನ್‌ನ 771 ಉಗ್ರರು ಶರಣಾಗಿದ್ದಾರೆ. 80 ಮಂದಿ ಗಾಯಾಳು ಸೇರಿ 1,730 ಉಗ್ರರು ಸೋಮವಾರದಿಂದ ಈವರೆಗೆ ಶರಣಾಗಿದ್ದಾರೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ, ಮೇಜರ್‌ ಜನರಲ್‌ ಐಗೋರ್‌ ಕೊನಶೆಂಕೊವ್‌ ಗುರುವಾರ ತಿಳಿಸಿದರು.

ಕ್ಷಮೆಯಾಚಿಸಿದ ರಷ್ಯಾ ಸೈನಿಕ: ಈಶಾನ್ಯ ಸುಮಿಯ ಹಳ್ಳಿಯಲ್ಲಿ ಕಳೆದ ಫೆ.28ರಂದು ಉಕ್ರೇನ್‌ ನಾಗರಿಕನ ತಲೆಗೆ ಗುಂಡು ಹಾರಿಸಿ ಹತ್ಯೆಗೈದ ರಷ್ಯಾದ ಯುದ್ಧ ಕೈದಿ ಸೈನಿಕ ವಾಡಿಮ್‌ ಶಿಶಿಮರಿನ್‌ (21) ಕ್ಷಮೆ ಕೇಳಿದ್ದಾರೆ.

ಜೀವಾವಧಿ ಶಿಕ್ಷೆಗೆ ಗುರಿಯಾಗುವ ಆತಂಕದಲ್ಲಿರುವಯುದ್ಧಾಪರಾಧ ವಿಚಾರಣಾಧೀನ ಕೈದಿ ಶಿಶಿಮರಿನ್,ರಸ್ತೆಯಲ್ಲಿ ನಡೆದು ಹೋಗುತ್ತಿದ್ದ 62 ವರ್ಷದ, ನಿರಾಯುಧ ನಾಗರಿಕನನ್ನು ಕೊಂದಿರುವುದನ್ನು ಕೋರ್ಟ್‌ನಲ್ಲಿ ಒಪ್ಪಿಕೊಂಡರು. ಮೃತನ ಪತ್ನಿಯನ್ನು ಉದ್ದೇಶಿಸಿ ‘ನೀವು ನನ್ನನ್ನು ಕ್ಷಮಿಸಲಾರಿರಿ. ಆದರೆ, ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದುಶಿಶಿಮರಿನ್‌ ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.