ಪೆಶಾವರ: ಪಾಕಿಸ್ತಾನದ ವಿವಿಧೆಡೆ ನಡೆದ ಭಯೋತ್ಪಾದಕ ದಾಳಿಗಳು ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಗಳಲ್ಲಿ ತಲಾ ಐವರು ಭದ್ರತಾ ಸಿಬ್ಬಂದಿ, ಉಗ್ರರು ಹಾಗೂ ನಾಗರಿಕರೊಬ್ಬರು ಅಸುನೀಗಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಐವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ.
ಹಂಗು ಜಿಲ್ಲೆಯ ಟೋರಾ ವಾರೈ ಪ್ರದೇಶದ ಕೋಟೆಯ ಮೇಲೆ ಉಗ್ರರು ಭಾನುವಾರ ತಡರಾತ್ರಿ ದಾಳಿ ನಡೆಸಿದ್ದು, ಅರೆಸೇನಾ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಖೈಬರ್ ಜಿಲ್ಲೆಯ ತಿರಾಹ ಕಣಿವೆಯಲ್ಲೂ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ ಎಂದಿದ್ದಾರೆ.
ಐವರು ಉಗ್ರರ ಹತ್ಯೆ: ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವು ಅಪ್ಪರ್ ದಿರ್ ಜಿಲ್ಲೆಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಮೃತಪಟ್ಟಿದ್ದಾರೆ.
ಗುಂಡಿನ ಚಕಮಕಿಯಲ್ಲಿ ನಾಗರಿಕರೊಬ್ಬರು ಮೃತಪಟ್ಟಿದ್ದು, ಏಳು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಒಬ್ಬನ ಶವ ಹಾಗೂ ಸೋಮವಾರ ಉಳಿದ ನಾಲ್ವರು ಉಗ್ರರ ಶವಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.