ಇಸ್ಲಾಮಾಬಾದ್: ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅವರ ಪತ್ನಿ ಬುಶ್ರಾ ಬೀಬಿ 190 ಮಿಲಿಯನ್ ಪೌಂಡ್ (6,478 ಕೋಟಿ ಪಾಕಿಸ್ತಾನಿ ರೂಪಾಯಿ) ಭ್ರಷ್ಟಾಚಾರ ಎಸಗಿದ್ದು ಸಾಬೀತಾಗಿದೆ. ಇಮ್ರಾನ್‌ಗೆ 14 ವರ್ಷ ಹಾಗೂ ಅವರ ಪತ್ನಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಿ, ಇಲ್ಲಿನ ನ್ಯಾಯಾಲಯವು ಶುಕ್ರವಾರ ಆದೇಶ ಪ್ರಕಟಿಸಿದೆ.
ಅದಿಲಾ ಜೈಲಿನಲ್ಲಿ ಸ್ಥಾಪಿಸಿದ್ದ ತಾತ್ಕಾಲಿಕ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸೀರ್ ಜಾವೇದ್ ಅವರು ತೀರ್ಪು ಪ್ರಕಟಿಸಿದರು. ಈ ಹಿಂದೆ ಮೂರು ಬಾರಿ ವಿವಿಧ ಕಾರಣಗಳಿಗಾಗಿ ತೀರ್ಪು ಪ್ರಕಟಿಸುವುದು ಮುಂದೂಡಿಕೆಯಾಗಿತ್ತು.
‘ಜೈಲು ಶಿಕ್ಷೆ ಜೊತೆಗೆ ಖಾನ್ ಅವರಿಗೆ 10 ಲಕ್ಷ ಪಾಕಿಸ್ತಾನಿ ರೂಪಾಯಿ, ಅವರ ಪತ್ನಿಗೆ 5 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ. ಒಂದೊಮ್ಮೆ ದಂಡ ಪಾವತಿಸಲು ಇಬ್ಬರು ವಿಫಲರಾದರೆ ಆರು ಹಾಗೂ ಮೂರು ತಿಂಗಳು ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸಬೇಕು. ದಂಪತಿ ಸ್ಥಾಪಿಸಿದ ಅಲ್–ಖಾದಿರ್ ವಿಶ್ವವಿದ್ಯಾಲಯದ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ(ಎನ್‌ಎಬಿ) 2023ರ ಡಿಸೆಂಬರ್‌ನಲ್ಲಿ ಇಮ್ರಾನ್ ಖಾನ್ (72), ಬುಶ್ರಾ ಬೀಬಿ (50) ಮತ್ತು ಇತರ ಆರು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ದೇಶದ ಖಜಾನೆಗೆ ಇಮ್ರಾನ್ ಖಾನ್ ದಂಪತಿ 190 ಮಿಲಿಯನ್ ಪೌಂಡ್‌ಗಳಷ್ಟು (ಪಾಕಿಸ್ತಾನ ರೂಪಾಯಿಯಲ್ಲಿ 50 ಶತಕೋಟಿ) ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಒಬ್ಬ ಉದ್ಯಮಿ ಸೇರಿ ಪ್ರಕರಣದ ಇತರೆ ಆರೋಪಿಗಳು ದೇಶದಿಂದ ಹೊರಗಿರುವ ಕಾರಣ ಖಾನ್ ಮತ್ತು ಬೀಬಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ವ್ಯವಹಾರವೊಂದರ ಇತ್ಯರ್ಥದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 50 ಶತಕೋಟಿ ರೂಪಾಯಿಯನ್ನು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ಪಾಕಿಸ್ತಾನಕ್ಕೆ ಹಿಂದಿರುಗಿಸಿತ್ತು. ಆ ಹಣವನ್ನು ಇಮ್ರಾನ್ ಖಾನ್ ದಂಪತಿ, ಮತ್ತಿತರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪ.
ಆದರೆ, ರಾಷ್ಟ್ರೀಯ ಖಜಾನೆಗೆ ಸೇರಬೇಕಿದ್ದ ಈ ಹಣವನ್ನು ಬೀಬಿ ಮತ್ತು ಖಾನ್‌ಗೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಹಾಯ ಮಾಡಿದ ಉದ್ಯಮಿಯ ವೈಯಕ್ತಿಕ ಲಾಭಕ್ಕಾಗಿ ತಿರುಗಿಸಿದ್ದರು ಎಂದು ಆರೋಪಿಸಲಾಗಿದೆ.
ಬೀಬಿ, ಅಲ್-ಖಾದಿರ್ ಟ್ರಸ್ಟ್‌ನ ಟ್ರಸ್ಟಿಯಾಗಿ, ಝೀಲಂನಲ್ಲಿರುವ ಅಲ್-ಖಾದಿರ್ ವಿಶ್ವವಿದ್ಯಾಲಯಕ್ಕಾಗಿ 458 ಕನಾಲ್(57 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಈ ಭ್ರಷ್ಟಾಚಾರದಿಂದ ಹಲವು ಲಾಭ ಪಡೆದ ಆರೋಪವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.