ADVERTISEMENT

ಎಡೆಬಿಡದೆ ಸುರಿದ ಮಳೆ: ಸಿಡ್ನಿಯಲ್ಲಿ 100 ವರ್ಷಗಳಲ್ಲೇ ಕಾಣದ ಭಾರೀ ಪ್ರವಾಹ

ಏಜೆನ್ಸೀಸ್
Published 22 ಮಾರ್ಚ್ 2021, 5:47 IST
Last Updated 22 ಮಾರ್ಚ್ 2021, 5:47 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಸಿಡ್ನಿ: ಆಸ್ಟ್ರೇಲಿಯಾದ ಆಗ್ನೇಯ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ ಸೋಮವಾರ ಸಿಡ್ನಿಯ ಉತ್ತರ ಭಾಗದಲ್ಲಿ 100 ವರ್ಷಗಳಲ್ಲೇ ಅತ್ಯಂತ ದೊಡ್ಡ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ, ಸಾವಿರಾರು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. 200ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ.‌

ಎಡೆಬಿಡದೆ ಸುರಿದ ಮಳೆಯಿಂದಾಗಿ ದೇಶದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ನ್ಯೂ ಸೌತ್ ವೇಲ್ಸ್‌ನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ, ಸಿಡ್ನಿಯ ವಾಯುವ್ಯ ಗಡಿಯ ಕೆಲವು ಭಾಗಗಳಲ್ಲಿ ದಶಕಗಳ ಅತಿದೊಡ್ಡ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ಹಿಂದೆಂದೂ ಕಂಡರಿಯದ ಹವಾಮಾನ-ಬದಲಾವಣೆಯ ಪರಿಣಾಮ ಕಾಳ್ಗಿಚ್ಚು ಹೊತ್ತಿಕೊಂಡಿದ್ದ ಅದೇ ಪ್ರದೇಶದಲ್ಲಿ ಈಗ ಪ್ರವಾಹ ಉಂಟಾಗಿದೆ. ದೀರ್ಘಕಾಲದ ಬರಗಾಲದ ನಂತರ ಸಿಡ್ನಿಯಲ್ಲಿ ಈಗ ಜಲದಿಗ್ಬಂಧನದ ಅನುಭವವಾಗುತ್ತಿದೆ.

ADVERTISEMENT

ಸಿಡ್ನಿಯ ವಿಶಾಲವಾದ ಹಾಕ್ಸ್‌ಬರಿ-ನೇಪಿಯನ್ ಕಣಿವೆ, ನದಿಗಳು 1961 ರಿಂದ ಕಾಣದ ಮಟ್ಟಕ್ಕೇರಿವೆ. ಸಿಡ್ನಿ ನಗರಕ್ಕೆ ಹೆಚ್ಚಿನ ಪ್ರಮಾಣದ ಕುಡಿಯುವ ನೀರನ್ನು ಒದಗಿಸುವ ವಾರಗಂಬ ಅಣೆಕಟ್ಟು ಶನಿವಾರದಿಂದತುಂಬಿ ಹರಿಯುತ್ತಿದೆ.

ರಾಜ್ಯದಾದ್ಯಂತ ಈವರೆಗೆ 18,000 ಜನರನ್ನು ಸ್ಥಳಾಂತರಿಸಲಾಗಿದ್ದು, ಸೋಮವಾರ ಬೆಳಿಗ್ಗೆ 2,000 ಜನರು ಸ್ಥಳಾಂತರಿಸುವ ಆದೇಶ ಮಾಡಲಾಗಿದೆ ಎಂದು ತುರ್ತು ಸೇವಾ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸದ್ಯ, ಯಾವುದೇ ಸಾವು ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಗಳು ಬಂದಿಲ್ಲವಾದರೂ ಮುಂದೆ ಎದುರಾಗುವ ಅಪಾಯದ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.