ADVERTISEMENT

‘ಸಂಘರ್ಷ ಶಮನಕ್ಕೆ ನೆರವು, ಜಿ–7 ಶೃಂಗಸಭೆಯ ಫಲಶ್ರುತಿ’

ಪಿಟಿಐ
Published 27 ಆಗಸ್ಟ್ 2019, 17:00 IST
Last Updated 27 ಆಗಸ್ಟ್ 2019, 17:00 IST
   

ವಾಷಿಂಗ್ಟನ್‌/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ವಿಷಮ ಸ್ಥಿತಿಯನ್ನು ಶಮನ ಮಾಡುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ನೆರವು ಜಿ–7 ಶೃಂಗಸಭೆಯ ಮುಖ್ಯ ಫಲಶ್ರುತಿಗಳಲ್ಲಿ ಒಂದು ಎಂದು ಶ್ವೇತಭವನ ಹೇಳಿದೆ. ಶೃಂಗಸಭೆ ಮುಗಿಸಿಕೊಂಡು ಟ್ರಂಪ್‌ ಅವರು ಅಮೆರಿಕಕ್ಕೆ ಸೋಮವಾರ ಮರಳಿದ್ದಾರೆ.

‘ಜಿ–7 ಶೃಂಗಸಭೆಯ ಐದು ಮುಖ್ಯ ಫಲಶ್ರುತಿಗಳೆಂದರೆ, ಒಗ್ಗಟ್ಟಿನ ಸಂದೇಶ, ಕೋಟ್ಯಂತರ ಡಾಲರ್‌ ಮೊತ್ತದ ವ್ಯಾಪಾರ ಒಪ್ಪಂದ, ಅಮೆರಿಕ–ಮೆಕ್ಸಿಕೊ–ಕೆನಡ ಒಪ್ಪಂದ, ಯುರೋಪ್‌ ಜತೆಗೆ ಇನ್ನೂ ಉತ್ತಮ ವ್ಯಾಪಾರ ಸಂಬಂಧ ಅಭಿವೃದ್ಧಿ ಮತ್ತು ಭಾರತ–ಪಾಕಿಸ್ತಾನ ನಡುವಣ ವಿಷಮ ಸ್ಥಿತಿ ಶಮನಕ್ಕೆ ನೆರವು’ ಎಂದು ಸೋಮವಾರದ ಮಾಧ್ಯಮಗೋಷ್ಠಿಯಲ್ಲಿ ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.

ಭಾರತ–ಪಾಕಿಸ್ತಾನದ ನಡುವೆ ಮಾತುಕತೆ ನಡೆಯುವ ಅಗತ್ಯ ಇದೆ ಎಂಬ ವಿಚಾರಕ್ಕೆ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಣ ಮಾತುಕತೆಯಲ್ಲಿ ಒತ್ತು ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಕಾಶ್ಮೀರ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವೇ ಇಲ್ಲ ಎಂದು ಟ್ರಂಪ್‌ ಜತೆಗಿನ ಸಂವಾದದಲ್ಲಿ ಮೋದಿ ಸ್ಪಷ್ಟವಾಗಿ ಹೇಳಿದ್ದರು.

ಚೀನಾ ಜತೆಗೆ ‘ಕಾಶ್ಮೀರ’ ಚರ್ಚೆ:ಚೀನಾದ ಕೇಂದ್ರೀಯ ಸೇನಾ ಆಯೋಗದ ಉಪಾಧ್ಯಕ್ಷ ಕ್ಸು ಕ್ವಿಲಾಂಗ್‌ ಅವರು ರಾವಲ್ಪಿಂಡಿಯಲ್ಲಿರುವ ಸೇನಾ ಕೇಂದ್ರ ಕಚೇರಿಗೆ ಸೋಮವಾರ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್‌ ಜಾವೇಡ್‌ ಬಾಜ್ವಾ ಜತೆಗೆ ಅವರು ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ಕಾಶ್ಮೀರ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದೆ.

ಸೌದಿಗೆ ಇಮ್ರಾನ್‌ ಕರೆ:ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ಅವರು ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಜತೆಗೆ ಒಂದು ತಿಂಗಳಲ್ಲಿ ಎರಡನೇ ಬಾರಿ ದೂರವಾಣಿ ಮೂಲಕ ಕಾಶ್ಮೀರ ವಿವಾದವನ್ನು ಚರ್ಚಿಸಿದ್ದಾರೆ.

ಭಾರತ–ಪಾಕಿಸ್ತಾನದ ನಡುವಣ ಯಾವುದೇ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶ ಇಲ್ಲ ಎಂದು ಟ್ರಂಪ್‌ ಸಮ್ಮುಖದಲ್ಲಿ ಮೋದಿ ಅವರು ಹೇಳಿದ ಬೆನ್ನಿಗೇ ಇಮ್ರಾನ್‌ ಅವರು ಈ ಕರೆ ಮಾಡಿದ್ದಾರೆ ಎಂದು ‘ದ ನ್ಯೂಸ್‌ ಇಂಟರ್‌ನ್ಯಾಷನಲ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.