ADVERTISEMENT

ಪೂರ್ವ ಲಡಾಕ್‌ನ ಸೇನೆ ಹಿಂತೆಗೆತಕ್ಕೆ ಒತ್ತಾಯ: ನಾಳೆ ಚೀನಾ ಜೊತೆ ಮಾತುಕತೆ?

ಪಿಟಿಐ
Published 8 ಏಪ್ರಿಲ್ 2021, 1:58 IST
Last Updated 8 ಏಪ್ರಿಲ್ 2021, 1:58 IST
ಲಡಾಖ್‌ನಲ್ಲಿ ಭಾರತೀಯ ಸೇನೆ: ಎಎಫ್‌ಪಿ ಚಿತ್ರ
ಲಡಾಖ್‌ನಲ್ಲಿ ಭಾರತೀಯ ಸೇನೆ: ಎಎಫ್‌ಪಿ ಚಿತ್ರ   

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಮುಂದಿನ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಶುಕ್ರವಾರ ನಡೆಯುವ ಸಾಧ್ಯತೆ ಇದೆ. ಪೂರ್ವ ಲಡಾಕ್‌ನ ವಿವಾದಿತ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಚೀನಾದ ಸೈನಿಕರನ್ನು ಹಿಂಪಡೆಯುವ ಕುರಿತಂತೆ ಈ ಮಾತುಕತೆ ಕೇಂದ್ರೀಕೃತವಾಗಿರಲಿದೆ ಎಂದು ಈ ಬೆಳವಣಿಗೆ ಬಗ್ಗೆ ಅರಿವಿರುವ ಮೂಲಗಳು ಪಿಟಿಐಗೆ ತಿಳಿಸಿವೆ.

ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್‌ನಲ್ಲಿ ಸೇನೆಯನ್ನು ಶೀಘ್ರ ವಿಸರ್ಜಿಸಲು ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಭಾರತ ಒತ್ತಾಯಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ 11 ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಸುವ ಬಗ್ಗೆ ಎರಡು ಕಡೆಯಿಂದ ಮಾಹಿತಿ ವಿನಿಮಯ ಸಹ ಆಗಿದೆ ಎಂದು ಮೂಲಗಳು ಹೇಳುತ್ತವೆ.

ADVERTISEMENT

ಕಳೆದ ವರ್ಷ ಮೇ 5 ರಂದು ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಮಿಲಿಟಿರಿ ನಡುವಿನ ಗಡಿರೇಖೆ ಸಂಘರ್ಷ ಸ್ಫೋಟಗೊಂಡಿತು. ಬಳಿಕ, ಎರಡೂ ಕಡೆಯಿಂದ ಗಡಿಯಲ್ಲಿ ಸಾವಿರಾರು ಸೈನಿಕರ ಮತ್ತು ಭಾರೀ ಶಸ್ತ್ರಾಸ್ತ್ರಗಳ ಜಮಾವಣೆ ಆರಂಭವಾಗಿತ್ತು.

ನಂತರ, ನಡೆದ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಸರಣಿಯ ಪರಿಣಾಮವಾಗಿ, ಭಾರತ ಮತ್ತು ಚೀನಾ ಪಡೆಗಳು ಫೆಬ್ರವರಿಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿದವು.

ಫೆಬ್ರವರಿ 20 ರಂದು ನಡೆದ ಮಿಲಿಟರಿ ಮಾತುಕತೆಯಲ್ಲಿ, ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಸೇರಿದಂತೆ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಭಾರತ ಒತ್ತಾಯಿಸಿತು.

ಉಭಯ ದೇಶಗಳ ನಡುವಿನ ಉತ್ತಮ ಸಂಬಂಧಗಳಿಗೆ ಗಡಿಯುದ್ದಕ್ಕೂ ಶಾಂತಿಯುತ ವಾತಾವರಣದ ಅಗತ್ಯವಿದೆ ಎಂದು ಭಾರತ ಹಿಂದಿನಿಂದಲೂ ಒತ್ತಾಯಿಸುತ್ತಿದೆ.

ಕಳೆದ ವಾರ, ಪೂರ್ವ ಲಡಾಖ್‌ನ ಉಳಿದ ಪ್ರದೇಶಗಳಲ್ಲಿರುವ ಸೇನೆಯನ್ನು ಚೀನಾ ಶೀಘ್ರವಾಗಿ ಹಿಂಪಡೆಯುತ್ತದೆ ಎಂದು ಭಾರತ ಆಶಿಸಿತ್ತು.

ಸೇನೆ ಹಿಂತೆಗೆತ ಪ್ರಕ್ರಿಯೆಯು ಗಡಿ ಪ್ರದೇಶಗಳಲ್ಲಿ ಶಾಂತಿಯುತ ವಾತಾವರಣ ಪುನಃಸ್ಥಾಪಿಸಲು ಕಾರಣವಾಗುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಅಗತ್ಯ ಪರಿಸ್ಥಿತಿಗಳನ್ನು ಒದಗಿಸುತ್ತದೆ ಎಂದು ಭಾರತ ಹೇಳಿದೆ.

ಪ್ಯಾಂಗೊಂಗ್ ಸರೋವರ ಪ್ರದೇಶಗಳಲ್ಲಿನ ಸೇನೆ ಹಿಂಪಡೆದ ಬಳಿಕ ಭಾರತದ ಆತಂಕ ಕಡಿಮೆಯಾಗಿದೆ. ಆದರೆ, ಅದು ಸಂಪೂರ್ಣವಾಗಿ ಹೋಗಿಲ್ಲ ಎಂದು ಮಾರ್ಚ್ ಅಂತ್ಯದಲ್ಲಿ, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.