ಬ್ಯಾಂಕಾಕ್: ‘ಹಿಂದೂ ಮಹಾಸಾಗರ–ಪೆಸಿಫಿಕ್ ಸಾಗರದಲ್ಲಿ ಸಂಘರ್ಷ ಮುಕ್ತ ವ್ಯವಸ್ಥೆ ಜಾರಿಯಾಗಬೇಕು ಎಂಬುದನ್ನು ಭಾರತ ಹಾಗೂ ಥಾಯ್ಲೆಂಡ್ ದೇಶಗಳು ಬೆಂಬಲಿಸುತ್ತವೆ. ನೀತಿಗಳು ಅಭಿವೃದ್ಧಿ ಕೇಂದ್ರಿತವಾಗಿರಬೇಕೇ ಹೊರತು ವಿಸ್ತಾರವಾದ ಆಗಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಥಾಯ್ಲೆಂಡ್ ಪ್ರಧಾನಿ ಪೆಟೊಂತಾರ್ನ್ ಶಿನೊವಾರ್ಥ್ ಅವರೊಂದಿಗೆ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಇದಕ್ಕೂ ಮೊದಲು ಎರಡು ದೇಶಗಳ ಮಧ್ಯದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ಮಾತುಕತೆ ನಡೆಸಲಾಯಿತು.
‘ಪ್ರವಾಸ, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ ಎರಡೂ ದೇಶಗಳ ನಡುವೆ ಸಹಕಾರ ನೀಡಿದ ಕುರಿತು ಒತ್ತು ನೀಡಲಾಯಿತು. ವ್ಯಾಪಾರ, ಹೂಡಿಕೆಗಳ ಬಗ್ಗೆಯೂ ಮಾತುಕತೆ ನಡೆಯಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಯಿತು’ ಎಂದು ಪ್ರಧಾನಿ ಮೋದಿ ಹೇಳಿದರು.
‘ನಾನು ಇಲ್ಲಿಗೆ ಬಂದ ನೆನಪಿನಲ್ಲಿ 18ನೇ ಶತಮಾನದ ‘ರಾಮಾಯಣ’ ಕಥೆಯನ್ನು ಹೇಳುವ ಮ್ಯೂರಲ್ ಚಿತ್ರಕಲೆಯುಳ್ಳ ವಿಶೇಷ ಅಂಚೆಚೀಟಿಯನ್ನು ಥಾಯ್ಲೆಂಡ್ ಸರ್ಕಾರವು ಬಿಡುಗಡೆ ಮಾಡಿದ್ದರ ಬಗ್ಗೆ ಕೃತಜ್ಞನಾಗಿದ್ದೇನೆ’ ಎಂದರು.
ಪ್ರಧಾನಿ ಮೋದಿ ಅವರಿಗೆ ಥಾಯ್ಲೆಂಡ್ ಪ್ರಧಾನಿ ಪೆಟೊಂತಾರ್ನ್ ಶಿನೊವಾರ್ಥ್ ಅವರು ತ್ರಿಪಿಟಿಕವನ್ನು ಉಡುಗೊರೆ ನೀಡಿದರು. ‘ಬುದ್ಧನಲವಾದ ಭಾರತದ ಪರವಾಗಿ ನಾನು ಇದನ್ನು ಕೈಮುಗಿದು ಸ್ವೀಕರಿಸುತ್ತೇನೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.