ADVERTISEMENT

ಅಮೆರಿಕ: ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಚಾಲಕ ಸಾವು

ಪಿಟಿಐ
Published 4 ಆಗಸ್ಟ್ 2021, 6:33 IST
Last Updated 4 ಆಗಸ್ಟ್ 2021, 6:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಅರಿಜೋನಾದ ಹೆದ್ದಾರಿಯೊಂದರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಟ್ರಕ್‌ ಚಾಲಕ ಮೃತಪಟ್ಟಿದ್ದಾರೆ.

ಮೃತರನ್ನು ಹರಿಯಾಣದ ಕರ್ನಾಲ್ ಜಿಲ್ಲೆಯ ನಿರ್ಮಲ್‌ ಸಿಂಗ್‌ ಎಂದು ಗುರುತಿಸಲಾಗಿದ್ದು, ಇವರು ಇಂಡಿಯಾನದಲ್ಲಿ ವಾಸವಾಗಿದ್ದರು.

‘ಈ ಘಟನೆ ಫ್ಯ್ಲಾಗ್‌ಸ್ಟಾಫ್‌ ನಗರದ ಹೆದ್ದಾರಿ 40ರಲ್ಲಿ ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ನಡೆದಿದೆ. ನಿರ್ಮಲ್‌ ಸಿಂಗ್‌ ಅವರು ಜಾರ್ಜಿಯಾದಿಂದ ಕ್ಯಾಲಿಫೋರ್ನಿಯಾಗೆ ಸರಕನ್ನು ಸಾಗಿಸುತ್ತಿದ್ದ ವೇಳೆ ಟ್ರಕ್‌ ಸ್ಕಿಡ್‌ ಆಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಸಂತ್ರಸ್ತನ ಸ್ನೇಹಿತರು ತಿಳಿಸಿದರು.

ADVERTISEMENT

ಈ ಅಪಘಾತದಲ್ಲಿ ನಿರ್ಮಲ್‌ ಸಿಂಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರ ಸ್ನೇಹಿತ ರಾಹುಲ್‌, ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ. ರಾಹುಲ್‌ ಅವರು ಮೂಲತಃ ಅಂಬಾಲಾದವರು.

ನಿರ್ಮಲ್‌ ಸಿಂಗ್‌ಗೆ ಪತ್ನಿ ಮತ್ತು 11 ವರ್ಷದ ಮಗಳಿದ್ದಾರೆ. ಅವರು ಕರ್ನಾಲ್‌ನಲ್ಲಿ ಇದ್ದಾರೆ. 14 ವರ್ಷದ ಅವರ ಪುತ್ರ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ.

ಅಮೆರಿಕದಲ್ಲಿರುವ ನಿರ್ಮಲ್‌ ಸ್ನೇಹಿತರು ಅವರ ಕುಟುಂಬಕ್ಕೆ ನೆರವಾಗಲು ಮತ್ತು ಅಂತ್ಯಕ್ರಿಯೆಗಾಗಿ ಹಣ ಸಂಗ್ರಹಿಸಲು ‘ಗೋಫಂಡ್‌ ಅಭಿಯಾನ’ವನ್ನು ಆರಂಭಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.